ನೊಯ್ಡಾದ ಮೊನಿಂದರ್ ಸಿಂಗ್ ಪಂಧೇರ್ ನಿವಾಸದಲ್ಲಿ 20 ಯುವತಿಯರು ಮತ್ತು ಮಕ್ಕಳನ್ನು ಹತ್ಯೆ ಮಾಡಿದ ಪ್ರಕರಣದಲ್ಲಿ ದೋಷಮುಕ್ತನಾಗಿದ್ದ ಮೊನಿಂದರ್ ಸಿಂಗ್ ಪಂಧೇರ್ ಈಗ ಕಂಬಿ ಎಣಿಸುವಂತಾಗಿದೆ. ಪಂಧೇರ್ ವಿರುದ್ಧ ಯಾವುದೇ ಸಾಕ್ಷ್ಯಗಳು ಸಿಗದಿದ್ದರಿಂದ ಸಿಬಿಐ ಅವನಿಗೆ ಕ್ಲೀನ್ ಚಿಟ್ ನೀಡಿತ್ತು.
ಆದರೆ ತನಿಖಾಧಿಕಾರಿ ದಿನೇಶ್ ಯಾದವ್‌ಗೆ ಪಂಧೇರ್ ನೀಡಿದ್ದ ತಪ್ಪೊಪ್ಪಿಗೆ ಹೇಳಿಕೆಯ ಕೇಸ್ ಡೈರಿ ಪುನಃ ಪತ್ತೆಯಾಗಿ ಪಂಧೇರ್ ಅಪರಾಧಗಳು ಬೆಳಕಿಗೆ ಬಂದಿವೆ. ವೇಶ್ಯೆಯೆಂದು ಹೇಳಲಾದ ಪಯಾಲ್ ಎಂಬ ಯುವತಿಯ ಅತ್ಯಾಚಾರ ಮತ್ತು ಕೊಲೆ ಮಾಡಿದ್ದಾಗಿ ಪಂಧೇರ್ ತಪ್ಪೊಪ್ಪಿಗೆ ಹೇಳಿಕೆಯನ್ನು ತನಿಖಾಧಿಕಾರಿ ದಿನೇಶ್ ಯಾದವ್ ದಾಖಲಿಸಿಕೊಂಡಿದ್ದರು.
ಪಯಾಲ್ ತನಗೆ ಬ್ಲಾಕ್‌ಮೇಲ್ ಮಾಡಿದ್ದರಿಂದ ಕೋಲಿ ಜತೆ ಸೇರಿ ಅವಳನ್ನು ಹತ್ಯೆ ಮಾಡಿದ್ದಾಗಿ ಪೊಲೀಸರಿಗೆ ನೀಡಿದ ಹೇಳಿಕೆಯಲ್ಲಿ ಪಂಧೇರ್ ತಿಳಿಸಿದ್ದ. ಆದರೆ ಅಮಾನತಾದ ಅಧಿಕಾರಿ ಯಾದವ್ ಕೇಸ್ ಡೈರಿಯನ್ನು ಮುಚ್ಚಿಟ್ಟಿದ್ದನ್ನು ಕೋರ್ಟ್ ಪತ್ತೆಹಚ್ಚಿತು.
ಅಧಿಕಾರಿ ಲಂಚ ಸ್ವೀಕರಿಸಿದ್ದನ್ನು ಕಂಡಿದ್ದಾಗಿ ಪಯಾಲ್ ತಂದೆ ನಂದಲಾಲ್ ಸಾಕ್ಷ್ಯವನ್ನು ಕೇಳಿದ ಬಳಿಕ ತನಿಖಾಧಿಕಾರಿಯನ್ನು ಮೇಲ್ನೋಟಕ್ಕೆ ಕಾಣುವ ಆರೋಪಿ ಎಂದು ಕೋರ್ಟ್ ಹೆಸರಿಸಿ ಜಾಮೀನು ರಹಿತ ವಾರಂಟ್ ಜಾರಿಮಾಡಿತ್ತು. ಪಂಧೇರ್ ವಿರುದ್ಧ ಅಪಹರಣ,ಅತ್ಯಾಚಾರ, ಹತ್ಯೆ ಮತ್ತು ಕ್ರಿಮಿನಲ್ ಸಂಚು ಆರೋಪವನ್ನು ಹೊರಿಸಲಾಗಿದ್ದು, ನಿಥಾರಿ ನಿವಾಸದಲ್ಲಿ 20 ಯುವತಿಯರು ಮತ್ತು ಮಕ್ಕಳನ್ನು ಹತ್ಯೆ ಮಾಡಿದ ಸುರೀಂದರ್ ಕೋಲಿಗೆ ಆಶ್ರಯ ನೀಡಿದ ಆರೋಪವನ್ನೂ ಪಂಧೇರ್ ಈಗ ಎದುರಿಸುತ್ತಿದ್ದಾನೆ.
ಇಲ್ಲಿನ ವಿಶೇಷ ಕೋರ್ಟ್ ಬುಧವಾರ ಮೊನಿಂದರ್ ಸಿಂಗ್ ಪಂಧೇರ್ ವಿರುದ್ಧ ಮೇಲಿನ ಆರೋಪಗಳನ್ನು ಹೊರಿಸಿತು. ನೊಯ್ಡಾದ ಪಂಧೇರ್ ಮನೆಯಲ್ಲಿ 20 ವರ್ಷ ಪ್ರಾಯದ ಯುವತಿಯ ಅಪಹರಣ, ಅತ್ಯಾಚಾರ ಮತ್ತು ಹತ್ಯೆ ಮಾಡಿದ್ದಕ್ಕಾಗಿ ಅವನ ವಿರುದ್ಧ ಆರೋಪ ಪಟ್ಟಿ ಸಿದ್ಧಪಡಿಸುವಂತೆ ಕಳೆದ ವಾರ ವಿಶೇಷ ನಿಯೋಜಿತ ಸಿಬಿಐ ಕೋರ್ಟ್ ತಿಳಿಸಿತ್ತು.
|