ದೆಹಲಿ ಶಾಲೆಯ ಶಿಕ್ಷಕಿಯೊಬ್ಬರು ತನ್ನ ವಿದ್ಯಾರ್ಥಿನಿಯರನ್ನು ವೇಶ್ಯವಾಟಿಕೆಗೆ ತಳ್ಳುತ್ತಿದ್ದಾರೆಂದು ನಕಲಿ ಕುಟುಕು ಕಾರ್ಯಾಚರಣೆ ಕೈಗೊಂಡ ಲೈವ್ ಇಂಡಿಯಾ ಚಾನೆಲ್ ಒಂದು ತಿಂಗಳ ನಿಷೇಧ ಎದುರಿಸುವ ಸಾಧ್ಯತೆಯಿದೆ.
ಕೇಬಲ್ ಟೆಲಿವಿಷನ್ ಕಾನೂನಿನ ಅಡಿಯಲ್ಲಿ ಕಾರ್ಯಕ್ರಮ ಸಂಹಿತೆ ಉಲ್ಲಂಘಿಸುವ ಮೂಲಕ ಚಾನೆಲ್ ತಪ್ಪೆಸಗಿದೆ ಎಂದು ಅಂತರ ಸಚಿವ ಸಮಿತಿ ತಿಳಿಸಿದೆ. ಚಾನೆಲ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಪ್ರಸಾರ ಮತ್ತು ವಾರ್ತೆ ಸಚಿವ ಪ್ರಿಯ ರಂಜನ್ ದಾಸ್ ಮುನ್ಷಿ ಇಂಗಿತ ವ್ಯಕ್ತಪಡಿಸಿದರು.
ಈ ವಿಷಯವನ್ನು ಸಮಿತಿಯು ಪರಿಶೀಲಿಸಿದ್ದು, ಚಾನೆಲ್ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು. ಕುಟುಕು ಕಾರ್ಯಾಚರಣೆಯ ಪ್ರಸಾರದಿಂದ ಉದ್ರಿಕ್ತರಾದ ಪೋಷಕರು ಮತ್ತು ನಿವಾಸಿಗಳು ಶಿಕ್ಷಕಿ ಮೇಲೆ ಹಲ್ಲೆ ನಡೆಸಿದ್ದಲ್ಲದೇ ಆಕೆಯನ್ನು ಜೈಲಿಗೆ ಹಾಕಲಾಗಿತ್ತು.
ಆದರೆ ತನಿಖೆಯ ಬಳಿಕ ವರದಿಗಾರನೊಬ್ಬ ನಕಲಿ ಕುಟುಕು ಕಾರ್ಯಾಚರಣೆ ನಡೆಸಿ ಶಾಲಾ ಬಾಲಕಿ ಸೋಗಿನಲ್ಲಿ ಪತ್ರಕರ್ತೆಯೊಬ್ಬಳನ್ನು ಬಳಸಿಕೊಂಡು ಶಿಕ್ಷಕಿ ವೇಶ್ಯಾವಾಟಿಕೆ ಜಾಲ ನಡೆಸುತ್ತಿದ್ದಾಳೆಂದು ಆರೋಪಿಸಿದ್ದು ಬೆಳಕಿಗೆ ಬಂತು. ಇಬ್ಬರನ್ನೂ ಜೈಲಿಗೆ ಕಳಿಸಿದ ಬಳಿಕ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ.
|