ಭಾರತ-ಅಮೆರಿಕ ಪರಮಾಣು ಸಹಕಾರ ಒಪ್ಪಂದ ಕಾರ್ಯಗತಗೊಳಿಸುವ ಮುನ್ನ ಅಮೆರಿಕದ ಒತ್ತಡಗಳಿಂದ ಉಂಟಾಗುವ ಗಂಭೀರ ಪರಿಣಾಮಗಳನ್ನು ಪರಿಶೀಲಿಸುವಂತೆ ಎಡಪಕ್ಷಗಳು ಶುಕ್ರವಾರ ಸರ್ಕಾರಕ್ಕೆ ಸೂಚಿಸಿದೆ.
ಈ ಒಪ್ಪಂದವನ್ನು ಕಾರ್ಯಗತಗೊಳಿಸುವ ಮುನ್ನ, ಭಾರತದ ಸಾರ್ವಭೌಮತೆಗೆ ಉಂಟಾಗುವ ಗಂಭೀರ ಪರಿಣಾಮಗಳ ಬಗ್ಗೆ ನಾವು ವ್ಯಕ್ತಪಡಿಸಿದ ಕಳವಳಗಳನ್ನು ಯುಪಿಎ ಸರ್ಕಾರ ಸೂಕ್ತ ರೀತಿಯಲ್ಲಿ ಗಮನಿಸಬೇಕು ಎಂದು ಸಿಪಿಎಂ ಪಾಲಿಟ್‌ಬ್ಯುರೊ ಸದಸ್ಯ ಸೀತಾರಾಂ ಯೆಚೂರಿ ತಿಳಿಸಿದರು.
123 ಒಪ್ಪಂದವನ್ನು ಕೂಡಲೇ ಕಾರ್ಯಗೊಳಿಸುವ ಬಗ್ಗೆ ಅಮೆರಿಕದ ರಾಯಭಾರಿ ಡೇವಿಡ್ ಮಲ್ಫೋರ್ಡ್ ಮತ್ತು ವಿದೇಶಾಂಗ ಖಾತೆಯ ಸಹಕಾರ್ಯದರ್ಶಿ ರಿಚರ್ಡ್ ಬೋಚರ್ ಹೇಳಿಕೆಗಳನ್ನು ಉಲ್ಲೇಖಿಸಿದ ಅವರು, ಅಮೆರಿಕದ ಒತ್ತಡಗಳಿಗೆ ಮಣಿಯಬಾರದು ಮತ್ತು ಒಪ್ಪಂದವನ್ನು ತಡೆಹಿಡಿಯಬೇಕೆಂದು ತಿಳಿಸಿದರು.
ರಾಜಕೀಯ ವೇಳಾಪಟ್ಟಿಯನ್ನು ಅಲಕ್ಷಿಸಬಾರದು ಮತ್ತು ಇರಾನ್ ವಿಷಯಕ್ಕೆ ಸಂಬಂಧಪಟ್ಟಂತೆ ಸ್ಪಷ್ಟ ನಿಲುವನ್ನು ಹೊಂದಬೇಕೆಂದು ಬೋಚರ್ ಬಯಸಿದ್ದರು. ಎಡಪಕ್ಷಗಳು ಕೂಡ ನಿಖರವಾಗಿ ಅದನ್ನೇ ಹೇಳುತ್ತಿವೆ ಎಂದು ಅವರು ನುಡಿದರು.
ಪರಮಾಣು ಒಪ್ಪಂದ ಕಾರ್ಯಗತಗೊಂಡರೆ ಭಾರತ ತನ್ನ ನೀತಿಯ ದಿಕ್ಕನ್ನು ಬದಲಿಸಿಕೊಳ್ಳಲು ಒತ್ತಡ ಹೆಚ್ಚುತ್ತದೆ ಎಂದು ಪೀಪಲ್ಸ್ ಡೆಮಾಕ್ರಸಿಯ ಮುಂಬರುವ ಸಂಚಿಕೆಯ ಸಂಪಾದಕೀಯದಲ್ಲಿ ಅವರು ಹೇಳಿದರು.
ಇಂತಹ ಒತ್ತಡಗಳು ವಿದೇಶಾಂಗ ನೀತಿ ನಿಲುವುಗಳಿಗೆ ಮಾತ್ರ ಸೀಮಿತವಾಗಿರುವುದಿಲ್ಲ. ರಕ್ಷಣಾ ಸಹಕಾರ, ಭದ್ರತೆ, ಗುಪ್ತಚರ ಸಹಕಾರ ಮುಂತಾದ ಮುಖ್ಯ ಕ್ಷೇತ್ರಗಳಿಗೂ ಅದು ವಿಸ್ತರಿಸುತ್ತದೆ ಎಂದು ಯೆಚೂರಿ ಹೇಳಿದರು.
ಸಿಪಿಐ ಕೇಂದ್ರ ಕಾರ್ಯಾಲಯ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ "123 ಒಪ್ಪಂದವನ್ನು ಸಮರ್ಥಿಸುವವರು ಹೈಡ್ ಕಾಯ್ದೆಯ ಪರಿಣಾಮ ಮತ್ತು ತನ್ನ ಜಾಗತಿಕ ಕಾರ್ಯತಂತ್ರದೊಳಗೆ ಭಾರತವನ್ನು ಎಳೆಯುವ ಅಮೆರಿಕ ಪ್ರಯತ್ನವನ್ನು ಅರ್ಥಮಾಡಿಕೊಳ್ಳಬೇಕು ಎಂದು ಹೇಳಿದೆ.
|