ಬಾಹ್ಯಾಕಾಶಕ್ಕೆ ಪ್ರಯಾಣಿಸದೇ ಭೂಮಿಯನ್ನು ರಕ್ಷಿಸುವ ಮಹತ್ವವನ್ನು ಮಹಾತ್ಮ ಗಾಂಧಿ ಅರಿತಿದ್ದರು ಎಂದು ಭಾರತೀಯ ಮೂಲದ ಅಮೆರಿಕ ಗಗನಯಾನಿ ಸುನಿತಾ ವಿಲಿಯಮ್ಸ್ ಶುಕ್ರವಾರ ತಿಳಿಸಿದರು.
ನಮ್ಮ ಗ್ರಹವನ್ನು ಶೀತ, ಬಿಸಿ ಮತ್ತು ನಿರ್ವಾತದ ಅಪಾಯಗಳಿಂದ ತೆಳು ನೀಲಿ ಗೆರೆ ರಕ್ಷಿಸುತ್ತಿದೆಯೆಂದು ಹೇಳಿದ ಅವರು, ಮಾನವ ಜೀವಿಗಳಾಗಿ ನಮ್ಮ ಗ್ರಹವನ್ನು ಆರೈಕೆ ಮಾಡುವುದು ನಮ್ಮ ಜವಾಬ್ದಾರಿಯಾಗಿದೆ. ಬಾಹ್ಯಾಕಾಶಕ್ಕೆ ತೆರಳದೆಯೂ ಇವೆರಡು ಭಾವನೆಗಳು ಮತ್ತು ತತ್ವಗಳನ್ನು ಗಾಂಧಿ ಅರಿತಿದ್ದರು ಎಂದು ಸಬರಮತಿ ಆಶ್ರಮಕ್ಕೆ ಭೇಟಿ ನೀಡಿದ ಸುನಿತಾ ಹೇಳಿದರು.
ಆಶ್ರಮದ ವಿದ್ಯಾರ್ಥಿಗಳ ಜತೆ ಸುನಿತಾ ತಮ್ಮ ಅನುಭವಗಳನ್ನು ಹಂಚಿಕೊಂಡರು. ತಾವು ಬಾಹ್ಯಾಕಾಶದಲ್ಲಿದ್ದಾಗ ಅನೇಕ ಭಾರತೀಯರು ತಮಗೆ ನೀಡಿದ ಅತ್ಯುತ್ಸಾಹದ ಬೆಂಬಲಕ್ಕೆ ಕೃತಜ್ಞರಾಗಿರುವುದಾಗಿ ಸುನಿತಾ ತಿಳಿಸಿದರು.
ಸುನಿತಾ ಅವರ ಸಾಮರ್ಥ್ಯ ಮತ್ತು ದೃಢಸಂಕಲ್ಪ ಮಹತ್ತರವಾಗಿದೆ. ಎಲ್ಲ ಭಾರತೀಯರು ಅವರ ದಾರಿಯಲ್ಲಿ ಸಾಗಿ ಮಹತ್ತರವಾದುದನ್ನು ಸಾಧಿಸಬೇಕೆಂದು ವಿದ್ಯಾರ್ಥಿನಿಯೊಬ್ಬಳು ತಿಳಿಸಿದಳು.
|