ನ್ಯಾಯಾಂಗ ನಿಂದನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈ ಮೂಲದ ಮಿಡ್ ಡೆ ಪತ್ರಿಕೆಯ ನಾಲ್ವರು ಪತ್ರಕರ್ತರಿಗೆ ದೆಹಲಿ ಉಚ್ಚ ನ್ಯಾಯಾಲಯ ನಾಲ್ಕು ತಿಂಗಳ ಜೈಲು ಶಿಕ್ಷೆ ವಿಧಿಸಿದೆ.
ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶ ವೈ ಕೆ ಸಬರವಾಲ್ ವಿರುದ್ಧ ಪ್ರಕಟಿಸಲಾಗಿದ್ದ ಸುದ್ದಿಗಳಿಗೆ ಸಂಬಂಧಿಸಿದಂತೆ ನ್ಯಾಯಾಲಯ ನಾಲ್ವರು ಪತ್ರಕರ್ತರಿಗೆ ಶಿಕ್ಷೆಯ ತೀರ್ಪು ನೀಡಿ ಆದೇಶ ಹೊರಡಿಸಿದ್ದು, ಪ್ರಕರಣದ ವಿಚಾರಣೆ ಸೆಪ್ಟಂಬರ್ 11 ಪೂರ್ಣಗೊಂಡಿತ್ತು.
ಹೈಕೋರ್ಟ್ ನ್ಯಾಯಾಧೀಶರಾದ ಆರ್ ಎಸ್ ಸೋದಿ ಮತ್ತು ಬಿಎನ್ ಚತುರ್ವೇದಿ ಅವರನ್ನು ಒಳಗೊಂಡ ವಿಭಾಗಿಯ ಪೀಠ ಮೇಲಿನಂತೆ ತೀರ್ಪು ನೀಡಿದ್ದು. ಶಿಕ್ಷೆಯ ವಿರುದ್ಧ ಅಪಾದಿತರು ಸುಪ್ರೀಂ ಕೋರ್ಟಿಗೆ ವಿಚಾರಣಾ ಮನವಿ ಸಲ್ಲಿಸಿದ್ದು, ಸುಪ್ರೀಂ ಕೋರ್ಟ್ ಕೂಡ ಅಪಾದಿತರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲು ಆದೇಶಿಸಿದೆ. ಸೆಪ್ಟಂಬರ್ 11 ರಂದು ನೀಡಿದ ತೀರ್ಪಿನಲ್ಲಿ ಸುದ್ದಿ ಪ್ರಕಟಣೆಗೆ ಸಂಬಂಧಿಸಿದಂತೆ ಪತ್ರಕರ್ತರು, ಲಕ್ಷ್ಮಣ ರೇಖೆಯನ್ನು ದಾಟಿದ್ದಾರೆ ಎಂದು ಆರೋಪಿಸಿತ್ತು.
ವಿಶಿಷ್ಟ ಪ್ರಕರಣದಲ್ಲಿ ನ್ಯಾಯಾಂಗದ ಉಚ್ಚ ಸಂಸ್ಥೆಯ ಘನತೆಗೆ ಅಪಾದಿತರು ದಕ್ಕೆ ತಂದಿದ್ದಾರೆ. ಆದ್ದರಿಂದ ಕನಿಷ್ಟ ನಾಲ್ಕು ತಿಂಗಳ ಶಿಕ್ಷೆ ನ್ಯಾಯವನ್ನು ಎತ್ತಿ ಹಿಡಿಯಬಹುದು ಎಂದು ತೀರ್ಪಿನಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದೆ.
ಮಿಡ್ ಡೆ ಪತ್ರಿಕೆ ಸಂಪಾದಕ ಎಂ ಕೆ ತಾಯಲ್, ಅಂದಿನ ಪ್ರಕಾಶಕ ಎಸ್ ಕೆ ಅಖ್ತರ್, ಸ್ಥಾನಿಕ ಸಂಪಾದಕಿ ವಿತುಶಾ ಓಬೆರಾಯ್, ಮತ್ತು ವ್ಯಂಗಚಿತ್ರಕಾರ ಇರ್ಫಾನ್ ಖಾನ್ ಅವರಿಗೆ ತಲಾ 10 ಸಾವಿರ ರೂ ಬಾಂಡ್ ಮತ್ತು ಇದೇ ಮೊತ್ತದ ಎರಡು ಗ್ಯಾರಂಟಿಯನ್ನು ಜಾಮೀನಿಗೆ ನೀಡಬೇಕು ಎಂದು ನಿರ್ದೇಶಿಸಿದೆ.
|