ಪರಮಾಣು ಒಪ್ಪಂದದ ಬಗ್ಗೆ ಸರ್ಕಾರ ಮತ್ತು ಎಡಕೂಟಗಳ ನಡುವೆ ಸಂಘರ್ಷ ಮುಂದುವರಿದಿರುವ ನಡುವೆ, ವಿದೇಶಾಂಗ ಸಚಿವ ಪ್ರಣವ್ ಮುಖರ್ಜಿ ಅಮೆರಿಕಕ್ಕೆ 10 ದಿನಗಳ ಭೇಟಿ ಸಲುವಾಗಿ ತೆರಳಲಿದ್ದಾರೆ. ಈ ಸಂದರ್ಭದಲ್ಲಿ ಅವರು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಕಂಡೋಲೀಜಾ ರೈಸ್ ಅವರನ್ನು ಭೇಟಿಯಾಗಲಿದ್ದಾರೆ.
ರೈಸ್ ಮತ್ತು ಮುಖರ್ಜಿ ನಡುವೆ ಮಾತುಕತೆಯಲ್ಲಿ ಪರಮಾಣು ಒಪ್ಪಂದದ ಅನುಷ್ಠಾನಕ್ಕೆ ಮುಂದಿನ ಕ್ರಮಗಳನ್ನು ಕುರಿತು ಚರ್ಚೆಯಾಗುವ ನಿರೀಕ್ಷೆಯಿದೆ ಎಂದು ಮೂಲಗಳು ಹೇಳಿವೆ. ಒಪ್ಪಂದ ಕಾರ್ಯಗತಗೊಳಿಸುವ ಮುಂದಿನ ಹೆಜ್ಜೆಗಳನ್ನು ಚುರುಕುಗೊಳಿಸುವ ಮೂಲಕ ಪ್ರಕ್ರಿಯೆಯನ್ನು ಡಿಸೆಂಬರ್ ಒಳಗೆ ಮುಗಿಸಲು ಅಮೆರಿಕ ಆಸಕ್ತವಾಗಿದೆ.
123 ಒಪ್ಪಂದ ಮುಗಿದ ಬಳಿಕ ಐಎಇಎ ಜತೆ ಪರಮಾಣು ಸ್ಥಾವರ ಸುರಕ್ಷತೆ ಒಪ್ಪಂದವನ್ನು ಕುರಿತು ಮತ್ತು ಪರಮಾಣು ಇಂಧನ ಸರಬರಾಜು ಗುಂಪಿನ ನಿಯಮಗಳ ಮಾರ್ಪಾಟಿಗೆ ಕೋರಲು ಭಾರತ ಮಾತುಕತೆ ನಡೆಸಬೇಕಾಗಿದೆ.
ಅಮೆರಿಕ 45 ರಾಷ್ಟ್ರಗಳ ಪರಮಾಣು ಇಂಧನ ಸರಬರಾಜು ಗುಂಪಿಗೆ ಒಪ್ಪಂದದ ಬಗ್ಗೆ ವಿವರಣೆ ನೀಡಿದೆ. ಒಪ್ಪಂದದ ಅನುಷ್ಠಾನದ ಬಗ್ಗೆ ಎಡಕೂಟಗಳು ಸರ್ಕಾರಕ್ಕೆ ಎಚ್ಚರಿಕೆ ನೀಡಿದ ಬಳಿಕ ಐಎಇಎ ಜತೆ ಸುರಕ್ಷತೆ ಒಪ್ಪಂದದ ಮಾತುಕತೆ ನೆನೆಗುದಿಗೆ ಬಿದ್ದಿತ್ತು.
|