ಸಂಭವನೀಯ ಮಧ್ಯಂತರ ಚುನಾವಣೆಗೆ ಮುನ್ನ ಮಹಿಳೆಯರ ಬೆಂಬಲ ಗಳಿಸುವ ಯತ್ನವಾಗಿ ಬಿಜೆಪಿ ತನ್ನ ಸಂಘಟನೆಯ ಎಲ್ಲ ಮಟ್ಟಗಳಲ್ಲಿ ಶೇ. 33 ಮೀಸಲಾತಿಗೆ ಶನಿವಾರ ಅನುಮೋದನೆ ನೀಡಿದ್ದು, ರಾಷ್ಟ್ರೀಯ ಕಾರ್ಯಕಾರಿಣಿಯು ಐತಿಹಾಸಿಕ ಕ್ರಮಕ್ಕೆ ಹಸಿರು ನಿಶಾನೆ ನೀಡಿದೆ.
ಇದು ಪಕ್ಷದ ಐತಿಹಾಸಿಕ ದಿನ. ರಾಷ್ಟ್ರೀಯ ಕಾರ್ಯಕಾರಿಣಿಯು ಪಕ್ಷದ ಎಲ್ಲ ಮಟ್ಟಗಳಲ್ಲಿ ಮಹಿಳೆಯರಿಗೆ ಶೇ.33 ಮೀಸಲಾತಿಗೆ ಒಪ್ಪಿಗೆ ನೀಡಿದೆ. ರಾಷ್ಟ್ರೀಯ ಮಂಡಳಿ ಅದಕ್ಕೆ ಅಂಗೀಕಾರ ನೀಡಲಿದೆ ಎಂದು ಪಕ್ಷದ ಹಿರಿಯ ನಾಯಕಿ ಸುಶ್ಮಾ ಸ್ವರಾಜ್ ವರದಿಗಾರರಿಗೆ ತಿಳಿಸಿದರು.
ಸಂಸತ್ತಿನಲ್ಲಿ ಮಹಿಳಾ ಮೀಸಲಾತಿ ಮಸೂದೆ ನೆನೆಗುದಿಗೆ ಬಿದ್ದಿರುವ ನಡುವೆ ಬಿಜೆಪಿಯ ಕ್ರಮ ಮಹತ್ವ ಪಡೆದಿದೆ. ಇತರ ರಾಜಕೀಯ ಪಕ್ಷಗಳ ವಿರುದ್ಧ ವಾಗ್ದಾಳಿ ಮಾಡಿದ ಸುಶ್ಮಾ ಸ್ವರಾಜ್ ಬಿಜೆಪಿ ಮಹಿಳಾ ವಿರೋಧಿ ಎಂಬ ಅಪಪ್ರಚಾರವನ್ನು ಈ ನಿರ್ಧಾರ ಹುಸಿಗೊಳಿಸಿದೆ ಎಂದು ಹೇಳಿದರು.
ಸಿಪಿಎಂ ಪಾಲಿಟ್‌ಬ್ಯುರೊನಲ್ಲಿ ಇತ್ತೀಚಿನವರೆಗೆ ಮಹಿಳೆಯರೇ ಇರಲಿಲ್ಲ ಎಂದು ಅವರು ಹೇಳಿದರು. ವಾಜಪೇಯಿ ಸರ್ಕಾರದಲ್ಲಿ ಬೇರಾವುದೇ ಸರ್ಕಾರಕ್ಕಿಂತ ಹೆಚ್ಚಿನ ಮಹಿಳಾ ಸಚಿವರಿದ್ದರು ಎಂದು ಹೇಳಿದ ಅವರು, ಯುಪಿಎ ಮಹಿಳಾ ಮೀಸಲಾತಿ ಕುರಿತು ಕರಡು ಮಸೂದೆಯನ್ನು ಕೂಡ ಸಿದ್ಧಪಡಿಸಿಲ್ಲ ಎಂದು ಆರೋಪಿಸಿದರು.
ಶೇ.33 ಸೂತ್ರ ಬಿಜೆಪಿಯ ಉನ್ನತ ಅಂಗವಾದ ಸಂಸತ್ತಿನ ಮಂಡಳಿ ಮತ್ತು ಕೇಂದ್ರ ಚುನಾವಣೆ ಸಮಿತಿಗೆ ಅನ್ವಯವಾಗುತ್ತದೆಯೇ ಎಂದು ಸುಶ್ಮಾ ಸ್ಪಷ್ಟವಾಗಿ ಹೇಳಲಿಲ್ಲ.
|