ಬಿಜೆಪಿಯ ತಮಿಳುನಾಡು ಘಟಕದ ಮುಖ್ಯಕಚೇರಿಗೆ ಭಾನುವಾರ ನೂರಾರು ಡಿಎಂಕೆ ಕಾರ್ಯಕರ್ತರು ನುಗ್ಗಿ ದಾಂಧಲೆ ನಡೆಸಿದರು. ಡಿಎಂಕೆ ಧುರೀಣ ಮತ್ತು ತಮಿಳುನಾಡು ಮುಖ್ಯಮಂತ್ರಿ ಎಂ.ಕರುಣಾನಿಧಿ ವಿರುದ್ಧ ಫತ್ವಾ ಹೊರಡಿಸಿದ ಬಿಜೆಪಿಯ ಮಾಜಿ ಸಂಸದ ರಾಮ್‌ವಿಲಾಸ್ ವೇದಾಂತಿಯನ್ನು ವಿರೋಧಿಸಿ ಪ್ರದರ್ಶನ ಮಾಡಿದರು.
ಟಿ.ನಗರ ಪ್ರದೇಶದಲ್ಲಿರುವ ಕಚೇರಿ ಆವರಣದೊಳಗೆ ಅನೇಕ ಡಿಎಂಕೆ ಕಾರ್ಯಕರ್ತರು ನುಗ್ಗಿ ಕಿಟಕಿ ಗಾಜುಗಳನ್ನು ಮತ್ತು ಗಾಜಿನ ಬಾಗಿಲುಗಳನ್ನು ಒಡೆದುಹಾಕಿದರೆಂದು ಬಿಜೆಪಿ ಪದಾಧಿಕಾರಿಗಳು ಆರೋಪಿಸಿದ್ದಾರೆ. ಕಚೇರಿ ಸಂಕೀರ್ಣದಲ್ಲಿ ನಿಲ್ಲಿಸಿದ್ದ ವಾಹನಗಳಿಗೆ ಹಾನಿ ಮಾಡಿದ್ದಲ್ಲದೇ ಕಲ್ಲು ತೂರಿದರು. ತಾವಲ್ಲದೇ ಪಕ್ಷದ ಅನೇಕ ಕಾರ್ಯಕರ್ತರು ಗಾಯಗೊಂಡಿದ್ದಾರೆಂದು ರಾಜ್ಯ ಪ್ರಧಾನ ಕಾರ್ಯದರ್ಶಿ ತಮಿಳಿಯಸಾಯಿ ಸೌಂದರರಾಜನ್ ವರದಿಗಾರರಿಗೆ ತಿಳಿಸಿದರು.
ಕಚೇರಿಯ ಬಳಿ ನಿಯೋಜಿಸಿದ್ದ ಸಣ್ಣ ಪೊಲೀಸ್ ತುಕಡಿ ಈ ಘಟನೆಯ ಬಗ್ಗೆ ಮೌನವಹಿಸಿದೆ.ವೇದಾಂತಿ ಕರುಣಾನಿಧಿ ವಿರುದ್ಧ ಫತ್ವಾ ಹೊರಡಿಸಿದ್ದನ್ನು ವಿರೋಧಿಸಿ ರಾಜ್ಯ ವಿದ್ಯುತ್ ಸಚಿವ ಎನ್. ವೀರಾಸ್ವಾಮಿ ತೀವ್ರ ಆಕ್ಷೇಪ ಸಲ್ಲಿಸಿದರು.
ವೇದಾಂತಿ ತಮ್ಮ ಮಾತನ್ನು ವಾಪಸ್ ತೆಗೆದುಕೊಳ್ಳದಿದ್ದರೆ ಕಪ್ಪು ಬಾವುಟ ಪ್ರದರ್ಶನ ಮಾಡುವುದಾಗಿ ಅವರು ಹೇಳಿದ್ದರು. ತಮ್ಮ ನಾಯಕನ ಜೀವಕ್ಕೆ ಬೆಲೆ ಕಟ್ಟಿದವರಿಗೆ ತಕ್ಕ ಉತ್ತರ ನೀಡುವಂತೆ ವೀರಾಸ್ವಾಮಿ ಪಕ್ಷದ ಕಾರ್ಯಕರ್ತರಿಗೆ ಕರೆ ನೀಡಿದ್ದರು.
|