ಮೂಲಸೌಲಭ್ಯಗಳಿಗೆ ಸಂಬಂಧಿಸಿದಂತೆ ಸರ್ಕಾರ ನ್ಯಾಯಾಂಗದ ಬಗ್ಗೆ ಮಲತಾಯಿ ಧೋರಣೆ ಅನುಸರಿಸುತ್ತಿದೆ ಎಂದು ಸುಪ್ರೀಂಕೋರ್ಟ್ ಬುಧವಾರ ಅಭಿಪ್ರಾಯಪಟ್ಟಿದೆ."ನ್ಯಾಯಾಂಗದ ಬಗ್ಗೆ ಮಲತಾಯಿ ಧೋರಣೆ ಅನುಸರಿಸುತ್ತಿರುವುದು ನಮಗೆ ಗೊತ್ತಿದೆ.
ಸರ್ಕಾರ ಜಿಲ್ಲಾ ನ್ಯಾಯಾಧೀಶರು ಅಥವಾ ಅವರಿಗೆ ನೀಡುವ ಸೌಲಭ್ಯಗಳ ಬಗ್ಗೆ ಚಿಂತಿಸುವುದಿಲ್ಲ. ಅದು ಪ್ರತಿಯೊಂದು ನಗರದಲ್ಲಿ ಸಂಭವಿಸುತ್ತಿದೆ" ಎಂದು ನ್ಯಾಯಮೂರ್ತಿ ಬಿ.ಎನ್. ಅಗರವಾಲ್, ಪಿ,ಪಿ. ನಾವ್ಲೆಕರ್ ಮತ್ತು ಡಿ.ಕೆ. ಜೈನ್ ಅವರಿದ್ದ ಪೀಠ ಅಭಿಪ್ರಾಯಪಟ್ಟಿದೆ.
ನ್ಯಾಯಾಂಗ ನೇಮಕಾತಿಗಳು ಮತ್ತು ರಾಜಧಾನಿಯಲ್ಲಿ ಏಕೈಕ ಸಿವಿಲ್ ಕೋರ್ಟ್ ಇರಬೇಕೆಂಬ ಬೇಡಿಕೆ ಕುರಿತು ವಿಚಾರಣೆ ನಡೆಸುತ್ತಿರುವಾಗ ಈ ವಿಷಯ ಪ್ರಸ್ತಾಪವಾಯಿತು, ದೇಶದಲ್ಲಿ ನ್ಯಾಯಾಧೀಶರಿಗೆ ಸೂಕ್ತ ಕೋರ್ಟ್ ರೂಂಗಳ ಸೌಲಭ್ಯವಿಲ್ಲ.
ಆದರೆ ಜಿಲ್ಲಾಧಿಕಾರಿಗಳು, ಪೊಲೀಸ್ ಸೂಪರಿಂಟೆಂಡೆಂಟ್ ಮತ್ತಿತರಿಗೆ ಪೂರ್ಣ ಸಜ್ಜಿತ ನಿವಾಸಗಳನ್ನು ಒದಗಿಸಲಾಗಿದೆ ಎಂದು ಕೋರ್ಟ್ ಅಭಿಪ್ರಾಯಪಟ್ಟಿತು. ನ್ಯಾಯಾಂಗಕ್ಕೆ ಎಂತಹ ಕಳಪೆ ಮೂಲಸೌಲಭ್ಯ ಕಲ್ಪಿಸಲಾಗಿದೆಯೆಂದರೆ ಸ್ಟೋರ್ ರೂಂ ಮತ್ತು ಕಾರಿಡಾರ್‌ಗಳನ್ನು ಕೋರ್ಟ್ ಹಾಲ್‌ಗಳಾಗಿ ಪರಿವರ್ತಿಸಲಾಗಿದೆ ಎಂದು ಅದು ಹೇಳಿದೆ.
ಇದಕ್ಕೆ ಮುನ್ನ ವಕೀಲರ ಸಂಘದ ಪರವಾಗಿ ವಾದ ಮಂಡಿಸಿದ ಅರುಣ್ ಜೈಟ್ಲಿ, ರಾಜಧಾನಿಯಲ್ಲಿ ವಿಚಿತ್ರ ಪರಿಸ್ಥಿತಿ ಉದ್ಭವಿಸಿದೆ. ಸುಮಾರು 9 ಸಿವಿಲ್ ಕೋರ್ಟ್‌ಗಳು ಕಾರ್ಯನಿರ್ವಹಿಸುತ್ತಿದ್ದು, ವಕೀಲರ ಸಂಘ ಮತ್ತು ಅರ್ಜಿದಾರರಿಗೆ ತೊಂದರೆಯಾಗಿದೆ ಎಂದು ಹೇಳಿದರು.
9 ಸಿವಿಲ್ ಕೋರ್ಟ್‌ಗಳ ಅವಶ್ಯಕತೆ ಇಲ್ಲ. ಏಕೆಂದರೆ ರಾಷ್ಟ್ರಾದ್ಯಂತ ನಗರಕ್ಕೆ ಅಥವಾ ಜಿಲ್ಲೆಗೆ ಒಂದೇ ಸಿವಿಲ್ ಕೋರ್ಟ್ ಕಾರ್ಯನಿರ್ವಹಿಸುವ ಪರಿಪಾಠವಿದೆ ಎಂದು ಹೇಳಿದರು.
|