ವಿವಾದದ ಶಿಖರ ಮುಟ್ಟಿದ ರಾಮ ಸೇತು ಯೋಜನೆಗೆ ಸಂಬಂಧಿಸಿದಂತೆ ವಿರೋಧ ಪಕ್ಷ ಭಾರತೀಯ ಜನತಾ ಪಕ್ಷ ತನ್ನ ಸ್ಪಷ್ಟೀಕರಣ ನೀಡಿದ್ದು, ರಾಮ ಸೇತು ಸಮುದ್ರಂ ಯೋಜನೆಗೆ ತನ್ನ ವಿರೋಧವಿಲ್ಲ ಆದರೆ ಯೋಜನೆಯ ನೀಲನಕ್ಷೆಯ ಬದಲಾವಣೆಗೆ ಮಾತ್ರ ತನ್ನ ವಿರೋಧ ಎಂದು ಹೇಳಿದೆ.
ಪಕ್ಷದ ಹಿರಿಯ ನಾಯಕ ವೇಂಕಯ್ಯ ನಾಯ್ಡು ಅವರು, ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿ, ಪಕ್ಷದ ಅಭಿಪ್ರಾಯವನ್ನು ಸ್ಪಷ್ಟಪಡಿಸಿದರು.ಯೋಜನೆಯ ನೀಲನಕ್ಷೆ ಮತ್ತು ರಾಮ ಸೇತು ಸುರಕ್ಷತೆಯ ಕುರಿತು ಮಾತ್ರ ಪಕ್ಷಕ್ಕೆ ಆತಂಕವಿದೆ. ಮಹಾತ್ವಾಂಕ್ಷಿ ಯೋಜನೆಗೆ ತನ್ನ ವಿರೋಧವಿಲ್ಲ. ಕಾಂಗ್ರೆಸ್ ಮತ್ತು ಅದರ ಸಹ ಪಕ್ಷಗಳು ಮಾಡಿರುವ ಬೇಜವಾಬ್ದಾರಿ ಹೇಳಿಕೆಗಳಿಂದ ಕಸಿವಿಸಿಯಾಗಿದೆ.
ಅಕ್ಟೋಬರ್ ಒಂದರಂದು ಡಿಎಂಕೆ ಕರೆದಿರುವ ಬಂದ್‌ಗೆ ನ್ಯಾಯಾಂಗ ನಿಂದನೆಯಾಗುತ್ತದೆ. ವಿಷಯ ನ್ಯಾಯಾಲಯದಲ್ಲಿ ಇದ್ದು, ಆಡಳಿತ ಪಕ್ಷವಾಗಿರುವ ಡಿಎಂಕೆ ಅದು ಹೇಗೆ ಬಂದ್‌ಗೆ ಕರೆ ನೀಡಬಹುದು ಎಂದು ನಾಯ್ಡು ಪ್ರಶ್ನಿಸಿದ್ದಾರೆ.
ಇದೇ ಸಂದರ್ಭದಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ರಾಜನಾಥ್ ಸಿಂಗ್ ಅವರು ಹಿರಿಯ ನಾಯಕರುಗಳ ಸಭೆಯನ್ನು ಕರೆದಿದ್ದು, ತಮಿಳುನಾಡಿನಲ್ಲಿ ಪಕ್ಷದ ಕಾರ್ಯಾಲಯಗಳ ಮೇಲೆ ಮಾಡಲಾಗುತ್ತಿರುವ ದಾಳಿಗಳ ಕುರಿತು ಸಭೆಯಲ್ಲಿ ಚರ್ಚಿಸಲಾಗುವುದು.
ರಾಷ್ಟ್ರಾಧ್ಯಕ್ಷೆ ಪ್ರತಿಭಾ ಪಾಟೀಲ್ ಅವರು ಈ ವಿಚಾರದಲ್ಲಿ ಮಧ್ಯೆ ಪ್ರವೇಶಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಬೇಕೆಂದು ಬಿಜೆಪಿ ಬಯಸಿದ್ದು ಈ ನಿಟ್ಟಿನಲ್ಲಿ ಪಕ್ಷದ ನಿಯೋಗ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಲಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
|