ಮಧ್ಯ ಕಾಶ್ಮೀರ ಜಿಲ್ಲೆಯ ಬದ್ಗಾಮ್‌ನಲ್ಲಿ ಬುಧವಾರ ಗ್ರಾಮಸ್ಥರು ಕಾಡುಕರಡಿಯೊಂದನ್ನು ಕೊಂದುಹಾಕುವ ಮೂಲಕ ಮಾನವ-ಪ್ರಾಣಿಗಳ ನಡುವೆ ಸಂಘರ್ಷ ಹೊಸ ತಿರುವನ್ನು ಪಡೆದುಕೊಂಡಿದೆ. ಕಳೆದ ಜನವರಿಯಿಂದೀಚೆಗೆ ಜನರು ವನ್ಯಪ್ರಾಣಿಗಳನ್ನು ಹತ್ಯೆ ಮಾಡಿದ ನಾಲ್ಕನೇ ಘಟನೆ ಇದಾಗಿದೆ.
ಇದೇ ಸಂದರ್ಭದಲ್ಲಿ ವನ್ಯಪ್ರಾಣಿಗಳು ಸುಮಾರು 12 ಜನರನ್ನು ಕೊಂದಿವೆ ಮತ್ತು ಅನೇಕ ಮಂದಿಯನ್ನು ಗಾಯಗೊಳಿಸಿವೆ. ಕರಡಿಯು ಸುತಾರನ್ ಗ್ರಾಮದಲ್ಲಿ ಬುಧವಾರ ಬೆಳಿಗ್ಗೆ ಹಾವಳಿ ನಡೆಸಿತು ಎಂದು ಪೊಲೀಸ್ ವಕ್ತಾರ ತಿಳಿಸಿದರು.
ಜನರು ಮನೆಯ ಒಳಗೆ ಉಳಿದರು ಮತ್ತು ರಸ್ತೆಯಲ್ಲಿದ್ದವರು ಜೀವವುಳಿಸಿಕೊಳ್ಳಲು ಓಡಿದರೆಂದು ತಿಳಿದುಬಂದಿದೆ. ಬಳಿಕ ಗ್ರಾಮಸ್ಥರು ಸ್ವಯಂರಕ್ಷಣೆ ಸಲುವಾಗಿ ಕರಡಿಯನ್ನು ಕೊಂದುಹಾಕಿದರೆಂದು ಪೊಲೀಸರು ತಿಳಿಸಿದರು.
ಇದಕ್ಕೆ ಮುನ್ನ 3 ವನ್ಯಪ್ರಾಣಿಗಳನ್ನು ಗ್ರಾಮಸ್ಥರು ಕಣಿವೆಯಲ್ಲಿ ಕೊಂದುಹಾಕಿದ್ದರು. ಉದ್ರಿಕ್ತ ಗ್ರಾಮಸ್ಥರು ಕರಡಿಗೆ ಬೆಂಕಿ ಇಟ್ಟಿದ್ದನ್ನು ಟಿವಿಚಾನೆಲ್‌ನಲ್ಲಿ ವೀಕ್ಷಿಸಿದ ಪ್ರಾಣಿಪ್ರಿಯ ಸಂಘಟನೆಗಳು ಭಾರೀ ಪ್ರತಿಭಟನೆ ನಡೆಸಿದ್ದವು, ಆದರೆ ಮಹಿಳೆಯರು ಮತ್ತು ಮಕ್ಕಳನ್ನು ವನ್ಯಪ್ರಾಣಿಗಳು ಕೊಂದಿವೆ ಎಂದು ಗ್ರಾಮಸ್ಥರು ದೂರಿದ್ದಾರೆ.
ಮಾನವ-ಪ್ರಾಣಿ ಸಂಘರ್ಷ ವಿಧಾನಸಭೆ ಅಧಿವೇಶನದಲ್ಲಿ ಕೂಡ ಪ್ರತಿಧ್ವನಿಸಿತ್ತು, ರಾಜ್ಯದಲ್ಲಿ ಕರಡಿಗಳು ಮತ್ತು ಚಿರತೆಗಳು ದಿನದಿತ್ಯ ದಾಳಿ ಮಾಡುತ್ತಿರುವ ಬಗ್ಗೆ ಪಕ್ಷಭೇದ ಮರೆತು ಸದಸ್ಯರು ಕಳವಳ ವ್ಯಕ್ತಪಡಿಸಿದ್ದರು.
|