ಕೇಂದ್ರದಲ್ಲಿ ಯುಪಿಎ ಸರ್ಕಾರ ಡಿಎಂಕೆ ಧುರೀಣ ಕರುಣಾನಿಧಿ ಅವರ ರಾಮ ವಿರೋಧಿ ಹೇಳಿಕೆಯಿಂದ ಬೇರ್ಪಟ್ಟು, ಅದನ್ನು ಹಿಂತೆಗೆದುಕೊಳ್ಳುವಂತೆ ಆಗ್ರಹಿಸಬೇಕು ಎಂದು ಬಿಜೆಪಿ ಅಧ್ಯಕ್ಷ ರಾಜನಾಥ್ ಸಿಂಗ್ ಬುಧವಾರ ಆಗ್ರಹಿಸಿದರು.
ಇಲ್ಲದಿದ್ದರೆ ಪ್ರಧಾನಮಂತ್ರಿಗಳು ಕೇಂದ್ರ ಸಂಪುಟದಿಂದ ಡಿಎಂಕೆ ಸಚಿವರನ್ನು ವಜಾ ಮಾಡಬೇಕು ಎಂದು ರಾಜ್ಯಬಿಜೆಪಿ ಮುಖ್ಯಕಚೇರಿ ಕಮಲಾಲಾಯಂನಲ್ಲಿ ವರದಿಗಾರರ ಜತೆ ಮಾತನಾಡುತ್ತಾ ತಿಳಿಸಿದರು, ಕೇಂದ್ರಸರ್ಕಾರ ಈ ವಿಷಯದಲ್ಲಿ ಇಬ್ಬಗೆಯ ನೀತಿ ಅನುಸರಿಸುತ್ತಿದೆ ಎಂದೂ ಅವರು ಆರೋಪಿಸಿದರು.
ಸಲ್ಮಾನ್ ರಷ್ದಿಯ "ಸಟಾನಿಕ್ ವರ್ಸಸ್" ನಿಷೇಧಿಸಿದ ಸರ್ಕಾರ ಹಿಂದು ಭಾವನೆಗಳನ್ನು ಕೆರಳಿಸುವ ಕರುಣಾನಿಧಿ ಹೇಳಿಕೆಗೆ ಅವಕಾಶ ನೀಡಿದೆ ಎಂದು ಟೀಕಿಸಿದರು. ಬಿಜೆಪಿ ಕಚೇರಿ ಮೇಲೆ ದಾಳಿಯನ್ನು ಖಂಡಿಸಿದ ಅವರು, ಸಂವಿಧಾನ ರಕ್ಷಿಸುವುದಾಗಿ ಪ್ರಮಾಣ ಮಾಡಿದ ಕೆಲವು ಸಚಿವರು ದಾಳಿಯಲ್ಲಿ ಭಾಗಿಯಾಗಿದ್ದಾರೆ. ಇಂತಹ ಬೆದರಿಕೆಗಳಿಗೆ ನಾವು ಜಗ್ಗುವುದಿಲ್ಲ ಎಂದೂ ಅವರು ಹೇಳಿದರು.
ತಮಿಳುನಾಡಿನಲ್ಲಿ ಡಿಎಂಕೆ ಮೈತ್ರಿಕೂಟ ಅ.1ರಂದು ಕರೆದಿರುವ ಬಂದ್ ಬಗ್ಗೆ ಪ್ರಸ್ತಾಪಿಸಿ, ಬಂದ್‌ಗಳನ್ನು ವಿವಿಧ ಹೈಕೋರ್ಟ್‌ಗಳು ಮತ್ತು ಸುಪ್ರೀಂಕೋರ್ಟ್ ನಿಷೇಧಿಸಿರುವಾಗ ಆಡಳಿಕ ಪಕ್ಷವೊಂದು ಹೇಗೆ ಬಂದ್ ಮಾಡುತ್ತದೆಂದು ಪ್ರಶ್ನಿಸಿದರು. ಸೇತುಸಮುದ್ರಂ ಯೋಜನೆಗೆ ಬಿಜೆಪಿ ವಿರೋಧವಿಲ್ಲ. ಆದರೆ ರಾಮಸೇತು ನಾಶಕ್ಕೆ ವಿರೋದಿಸುತ್ತದೆಂದು ಹೇಳಿದರು.
|