ಜನಸಾಮಾನ್ಯರಿಗೆ ಕೇಜಿಗೆ 2 ರೂ.ದರದಲ್ಲಿ ಅಕ್ಕಿ ವಿತರಣೆಗೆ ಕೇಂದ್ರಸರ್ಕಾರವು ರಾಜ್ಯಗಳಿಗೆ ಸಹಾಯಧನ ನೀಡಬೇಕು ಎಂದು ಆಂದ್ರಪ್ರದೇಶ ಮುಖ್ಯಮಂತ್ರಿ ವೈ.ಎಸ್. ರಾಜಶೇಖರ ರೆಡ್ಡಿ ಹೇಳಿದ್ದಾರೆ. ಕೇಂದ್ರಸರ್ಕಾರವು ಬಿಳಿ ಪಡಿತರ ಕಾರ್ಡ್ ಹೊಂದಿರುವ ಕಡುಬಡವರಿಗೆ ಕೇಜಿಗೆ 5.75ರೂ.ನಂತೆ ಅಕ್ಕಿಯನ್ನು ರಾಜ್ಯಗಳಿಗೆ ವಿತರಿಸುತ್ತಿದೆ.
ಕಡುಬಡವರಿಗೆ ವಿತರಿಸುವ ಈ ಅಕ್ಕಿಯ ಬೆಲೆಯನ್ನು ಕೇಜಿಗೆ 2ರೂ.ಗೆ ತಗ್ಗಿಸಬೇಕು ಎಂದು ಅವರು ಹೇಳಿದರು. ರಾಜಧಾನಿಯಲ್ಲಿದ್ದ ರೆಡ್ಡಿ, ಬುಧವಾರ ಈ ವಿಷಯವನ್ನು ಸೋನಿಯಾ ಗಾಂಧಿ ಜತೆ ಚರ್ಚಿಸಿದರು. ಜನಸಾಮಾನ್ಯರಿಗೆ ಕೇಜಿಗೆ 2 ರೂ.ದರದಲ್ಲಿ ಅಕ್ಕಿ ವಿತರಿಸಲು ಕೇಂದ್ರಕ್ಕೆ ಮನದಟ್ಟು ಮಾಡುವಂತೆ ಅವರಿಗೆ ತಿಳಿಸಿದ್ದಾಗಿ ಮುಖ್ಯಮಂತ್ರಿ ಹೇಳಿದರು.
ರೈತರ ಬೆಳೆಗೆ ಸೂಕ್ತ ದರ ಸಿಗುವಂತೆ ನೋಡಿಕೊಳ್ಳುವುದು ಕೂಡ ಸರ್ಕಾರದ ಜವಾಬ್ದಾರಿ ಎಂದು ಅವರು ಹೇಳಿದರು. ದೇಶದ ಸಮಗ್ರ ಬೆಳವಣಿಗೆಗೆ ಜನಸಾಮಾನ್ಯರಿಗೆ ಅಗ್ಗದ ದರದಲ್ಲಿ ಆಹಾರ ಸಿಗಬೇಕು,
ಕನಿಷ್ಠ ಕಡುಬಡವರಿಗಾದರೂ ಕೇಂದ್ರ ಸರ್ಕಾರ ಹೆಚ್ಚು ಸಬ್ಸಿಡಿ ಒದಗಿಸಬೇಕು ಎಂದು ರೆಡ್ಡಿ ಹೇಳಿದರು. ರೈತರಿಗೆ ಉಚಿತ ವಿದ್ಯುತ್ ನೀಡುತ್ತಿರುವ ಏಕೈಕ ರಾಜ್ಯ ಆಂಧ್ರಪ್ರದೇಶ ಎಂದು ರೆಡ್ಡಿ ಗಮನಸೆಳೆದರು.
|