ಸಂಸತ್ತಿನಲ್ಲಿ ಪದೇ ಪದೇ ಹೆಚ್ಚುತ್ತಿರುವ ಸಂಸದರ ವರ್ತನೆಯಿಂದ ಬೇಸರಗೊಂಡಿರುವ ಲೋಕಸಭಾ ಸ್ಪೀಕರ್ ಸೋಮನಾಥ್ ಚಟರ್ಜಿ ಅವರು, ಅನುಚಿತ ವರ್ತನೆ ಮಾಡುತ್ತಿರುವ ಸಂಸದರನ್ನು ವಾಪಸ್ ಕರೆಯುವ ಅಧಿಕಾರವನ್ನು ನಾಗರಿಕರಿಗೆ ನೀಡುವಂತಹ ಮಸೂದೆಯನ್ನು ಜಾರಿಗೆ ತರಬೇಕು ಎಂದು ಹೇಳಿದ್ದಾರೆ.
ಸಂಸತ್ತು ಸರಿಯಾದ ರೀತಿಯಲ್ಲಿ ಕಾರ್ಯನಿರ್ವಹಿಸಲು ಸಾಧ್ಯವಾಗದಂತಹ ಪರಿಸ್ಥಿತಿಯನ್ನು ನಿರ್ಮಿಸುವ ಸಂಸತ್ ಸದಸ್ಯರನ್ನು ವಾಪಸ್ ಕಳುಹಿಸುವುದಕ್ಕೆ ವಿಚಾರ ಮಾಡಬೇಕಾದ ಅನಿವಾರ್ಯತೆ ಇಂದು ಎದುರಾಗಿದೆ. ಇವರುಗಳ ವರ್ತನೆ ಸಾಮಾನ್ಯ ನಾಗರಿಕನು ವ್ಯವಸ್ಥೆಯ ಬಗ್ಗೆ ಸಂಪೂರ್ಣ ಹತಾಶೆಗೊಳ್ಳುವ ಮೊದಲು, ನಾಗರಿಕರು ಅಂತಹ ಅನುಚಿತ ಸಂಸದರನ್ನು ವಾಪಸ್ ಕರೆಸಿಕೊಳ್ಳುವ ಮಸೂದೆಯನ್ನು ಪ್ರಜಾಪ್ರಭುತ್ವದ ಸಂಸ್ಥೆಗಳು ಜಾರಿಗೆ ತರಬೇಕು ಎಂದು ಅವರು ಹೇಳಿದರು.
ಆಯ್ಕೆಯಾಗಿರುವ ಸಂಸದರು ತಮ್ಮ ಕ್ಷೇತ್ರಗಳ ನಾಗರಿಕರಿಗೆ ಜವಾಬ್ದಾರಿಯಾಗಿರಬೇಕಾಗಿರುತ್ತದೆ. ಸಂಸದರನ್ನು ಮರಳಿ ಕರೆಸಿಕೊಳ್ಳುವ ಹಕ್ಕು ಮತ್ತು ತಮ್ಮ ಕ್ಷೇತ್ರದ ಕುರಿತಂತೆ ಸಂಸದರ ಜವಾಬ್ದಾರಿಗಳು ಕುರಿತು ಕಾಮನ್‌ವೆಲ್ತ್ ಸಂಸದೀಯ ವಿಚಾರ ಸಂಕೀರ್ಣದಲ್ಲಿ ಅವರು ಮಾತನಾಡುತ್ತಿದ್ದರು.
ಪ್ರಸಕ್ತ ಸಂಸದೀಯ ವ್ಯವಸ್ಥೆ ಕುರಿತು ನಾಗರಿಕರು ಹತಾಶೆಯಾಗಿದ್ದು, ಸಂಸದರ ಕಾರ್ಯನಿರ್ವಹಣೆ ಕುರಿತು ಅವರಿಗೆ ವಿಶ್ವಾಸ ಉಳಿದಿಲ್ಲ. ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇರಿಸಿ ಅದರ ಪ್ರಕಾರ ಸರಕಾರವನ್ನು ರಚಿಸಿರುವ ದೇಶಗಳು ಈ ನಿಟ್ಟಿನಲ್ಲಿ ತುರ್ತಾಗಿ ಗಮನ ಹರಿಸಬೇಕಾಗಿದೆ. ಈಗಾಗಲೇ ಈ ವಿಚಾರದಲ್ಲಿ ವಿಳಂಬವಾಗಿರುವುದು ಸಂಸದರ ಮತ್ತು ಸಂಸತ್ತಿನ ಮೇಲೆ ಜನರು ಇಟ್ಟಿರುವ ನಂಬಿಕೆ ಬುಡಮೇಲು ಮಾಡುವಂತಾಗಿದೆ.
ಕೇಲ ಸಂದರ್ಭಗಳಲ್ಲಿ ಜನಪ್ರತಿನಿಧಿಗಳು ಅನುಚಿತ ವ್ಯವಹಾರ ಮತ್ತು ಚಟುವಟಿಕೆಗಳಲ್ಲಿ ತೋಡಗಿರುವುದು ದೃಡಪಟ್ಟಿದೆ. ಪರಿಣಾಮ ನಾಗರಿಕರನ್ನು ಪ್ರತಿನಿಧಿಸುವ ಸಂಸ್ಥೆಗಳ ಮೇಲೆ ಜನರ ವಿಶ್ವಾಸ ಕಳೆದು ಹೋಗುವಂತೆ ಮಾಡಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
|