ಸೇತುಸಮುದ್ರಂ ವಿಷಯದ ಬಗ್ಗೆ ಡಿಎಂಕೆ ನೇತೃತ್ವದ ಡಿಪಿಎ ನಾಯಕರು ಸೋಮವಾರ ರಾಜ್ಯವ್ಯಾಪಿ ನಿರಶನ ನಡೆಸಿದರು. ನಿರಶನ ಬೆಳಿಗ್ಗೆ 9 ಗಂಟೆಗೆ ಆರಂಭವಾಗಿ ಸಂಜೆ 5 ಗಂಟೆಗೆ ಮುಕ್ತಾಯವಾಯಿತು.
ಆಡಳಿತರೂಢ ಡಿಎಂಕೆ ಮತ್ತು ಪ್ರತಿಪಕ್ಷ ಎಐಎಡಿಎಂಕೆ ಕಾರ್ಯಕರ್ತರ ನಡುವೆ ಕೆಲವು ಕಲ್ಲುತೂರಾಟದ ಮತ್ತು ಹಿಂಸಾಚಾರದ ಘಟನೆಗಳನ್ನು ಬಿಟ್ಟರೆ ರಾಜ್ಯದಲ್ಲಿ ಚಳವಳಿ ಶಾಂತಿಯುತವಾಗಿ ಮುಂದುವರೆಯಿತು ಎಂದು ಪೊಲೀಸರು ತಿಳಿಸಿದ್ದಾರೆ.
ನಿರಶನ ನಡೆಸುವುದರ ವಿರುದ್ಧ ನಿರ್ಧರಿಸಿದ್ದ 84 ವರ್ಷ ವಯಸ್ಸಿನ ಕರುಣಾನಿಧಿ ರಾಜ್ಯ ಅತಿಥಿ ಗೃಹದ ಬಳಿ ನಿರಶನ ಉದ್ಘಾಟಿಸಿದರು. ಸುಪ್ರೀಂಕೋರ್ಟ್ ಬಂದ್‌ಗೆ ತಡೆಯಾಜ್ಞೆ ನೀಡಿರುವುದರಿಂದ ಡಿಎಂಕೆ ನೇತೃತ್ವದ ಡಿಪಿಎಗೆ ಉಪವಾಸ ನಿರಶನ ಕೈಗೊಳ್ಳದೇ ಬೇರೆ ಮಾರ್ಗವೇ ಇಲ್ಲ ಎಂದು ಅವರು ತಿಳಿಸಿದರು.
ನಿರಶನ ಸ್ಥಳಕ್ಕೆ ಬೆಳಿಗ್ಗೆ 9 ಗಂಟೆಗೆ ಮುಖ್ಯಮಂತ್ರಿ ಆಗಮಿಸಿದರು ಆದರೆ ಮೈತ್ರಿಕೂಟದ ನಾಯಕರು ಅವರ ಆರೋಗ್ಯದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರಿಂದ 11.30ಕ್ಕೆ ಕಕುಣಾನಿಧಿ ಸಚಿವಾಲಯಕ್ಕೆ ತೆರಳಿದರು. ಡಿಎಂಕೆ ಪ್ರಧಾನಕಾರ್ಯದರ್ಶಿ ಕೆ. ಅನ್ಬಳಗನ್ ನೇತೃತ್ವದಲ್ಲಿ ಡಿಪಿಎ ನಾಯಕರು ನಿರಶನ ನಡೆಸಿದರು.
ಕೇಂದ್ರ ಸಚಿವ ಟಿ.ಆರ್. ಬಾಲು, ಎ.ರಾಜ, ಎಳಂಗೋವನ್, ಜಿ.ಕೆ. ವಾಸನ್, ಟಿಎನ್‌ಸಿಸಿ ಅಧ್ಯಕ್ಷ ಎಂ, ಕೃಷ್ಣಮೂರ್ತಿ, ಪಿಎಂಕೆ ನಾಯಕ ರಾಮದಾಸ್ ಮತ್ತು ಎಡಪಕ್ಷಗಳ ನಾಯಕರಾದ ಎನ್. ವರದರಾಜನ್ ಮತ್ತು ಡಿ. ಪಾಂಡಿಯನ್ ನಿರಶನಲ್ಲಿ ಉಪಸ್ಥಿತರಿದ್ದರು. ಸಂಜೆ 5 ಗಂಟೆಗೆ ಡಿಎಂಕೆ ಕೋಶಾಧಿಕಾರಿ ಆರ್ಕಾಟ್ ವೀರಾಸ್ವಾಮಿ ಅನ್ಬಳಗನ್ ಮತ್ತಿತರ ನಾಯಕರಿಗೆ ಹಣ್ಣಿನ ರಸ ನೀಡಿ ಉಪವಾಸ ತೆರೆಎಳೆದರು.
|