ಸೇತುಸಮುದ್ರ ಯೋಜನೆ ವಿಷಯವಾಗಿ ತಮಿಳುನಾಡಿನಲ್ಲಿ ಬೆಳಿಗ್ಗೆ ಬಸ್ ಸಂಚಾರವಿಲ್ಲದೇ ಸಾಮಾನ್ಯ ಜನಜೀವನ ಸ್ಥಗಿತಗೊಂಡಿದ್ದರಿಂದ ಪ್ರತಿಪಕ್ಷ ಎಐಎಡಿಎಂಕೆ ಬೆಳಿಗ್ಗೆ ಪುನಃ ಸುಪ್ರೀಂಕೋರ್ಟನ್ನು ಸಂಪರ್ಕಿಸಿ ತಡೆಯಾಜ್ಞೆ ನಡುವೆಯೂ ರಾಜ್ಯದಲ್ಲಿ ಬಂದ್ ಆಚರಿಸಲಾಗುತ್ತಿದೆ ಎಂದು ದೂರಿತು.
ತಮ್ಮ ಆದೇಶಕ್ಕೆ ಅವಿಧೇಯತೆ ತೋರಿದ ಕ್ರಮವನ್ನು ಸುಪ್ರೀಂಕೋರ್ಟ್ ಗಂಭೀರವಾಗಿ ಪರಿಗಣಿಸಿ, ಇದು ನ್ಯಾಯಾಲಯ ನಿಂದನೆಯಾಗುತ್ತದೆ ಎಂದು ಎಚ್ಚರಿಸಿತು. ಬಂದ್ ಕರೆ ಮುಂದುವರಿಕೆಯಿಂದ ಕಾನೂನು ಸುವ್ಯವಸ್ಥೆ ಸಂಪೂರ್ಣ ಕುಸಿಯುತ್ತಾದ್ದರಿಂದ ಯುಪಿಎ ಸರ್ಕಾರ ರಾಷ್ಟ್ರಪತಿ ಆಡಳಿತವನ್ನು ತಮಿಳುನಾಡಿನಲ್ಲಿ ಹೇರಲು ಹಿಂಜರಿಯಬಾರದೆಂದು ಸೂಚಿಸಿತು.
ಸುಪ್ರೀಂಕೋರ್ಟ್ ಎಚ್ಚರಿಕೆಯಿಂದ ರಾಜ್ಯದಲ್ಲಿ ಪರಿಸ್ಥಿತಿ ತಿರುವುಮುರುವಾಯಿತು. ಕರುಣಾನಿಧಿ ನಿರಶನ ಸ್ಥಳದಿಂದ ನಿರ್ಗಮಿಸಿದರು ಮತ್ತು ಬಸ್‌ಗಳು ಸಂಚಾರ ಆರಂಭಿಸಿದವು. ಆದಾಗ್ಯೂ ಅಂಗಡಿ, ವಾಣಿಜ್ಯ ಸಂಕೀರ್ಣಗಳು ಮುಚ್ಚಿದ್ದವು. ಸಂಜೆ 6 ಗಂಟೆಯ ಬಳಿಕ ಸಹಜ ಪರಿಸ್ಥಿತಿ ನೆಲೆಸಿತು.
ಸುಪ್ರೀಂಕೋರ್ಟ್ ಎಚ್ಚರಿಕೆಗೆ ಪ್ರತಿಕ್ರಿಯಿಸಿದ ಕರುಣಾನಿಧಿ ಅದರ ಆದೇಶ ಉಲ್ಲಂಘಿಸುವ ಪ್ರಶ್ನೆಯೇ ಇಲ್ಲ. ಏಕೆಂದರೆ ನಿರಶನ ನಡೆಸದಂತೆ ಸುಪ್ರೀಂಕೋರ್ಟ್ ನಿರ್ಬಂಧ ವಿಧಿಸಿಲ್ಲ ಎಂದು ಹೇಳಿದರು. ಸುಪ್ರೀಂಕೋರ್ಟ್ ಬಂದ್‌ಗೆ ತಡೆಯಾಜ್ಞೆ ನೀಡಿದ್ದರಿಂದ ನಿರಶನ ಕೈಗೊಳ್ಳದೇ ಬೇರೆ ಮಾರ್ಗವೇ ಇರಲಿಲ್ಲ ಎಂದು ಹೇಳಿದರು.
ರಾಜ್ಯದಲ್ಲಿ ಆಡಳಿತ ಯಂತ್ರ ಕುಸಿದಿಲ್ಲ ಎಂದು ಅವರು ಹೇಳಿದರು. ಸಾಮಾನ್ಯ ಜೀವನಕ್ಕೆ ಯಾವುದೇ ತೊಂದರೆಯಾಗಿಲ್ಲ ಮತ್ತು ಬಸ್‌ಗಳು ಸಂಚರಿಸುತ್ತಿವೆ ಎಂದು ವಾದಮಂಡಿಸಿದರು.
ಅಣ್ಣಾಡಿಎಂಕೆ ನಾಯಕಿ ವಿರುದ್ಧ ಹಲವಾರು ಪ್ರಕರಣಗಳು ಬಾಕಿಯಿರುವ ಬಗ್ಗೆ ಬೇಸರ ವ್ಯಕ್ತಪಡಿಸಿದ ಅವರು, ನಾವು ತಾರತಮ್ಯದ ಪರಿಸರದಲ್ಲಿ ಜೀವಿಸುತ್ತಿದ್ದೇವೆ ಎಂದು ಟೀಕಿಸಿದರು.
|