ಹೆಣ್ಣು ಮಕ್ಕಳ ಅನುಪಾತ ದೇಶದಲ್ಲಿ ಕುಸಿಯುತ್ತಿರುವುದು ನಾಚಿಕೆಗೇಡಿನ ವಿಷಯ ಎಂದು ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಮಂಗಳವಾರ ಟೀಕಿಸಿದರು. ಹೆಣ್ಣುಮಕ್ಕಳನ್ನು ಶಾಪವೆಂದು ಕಾಣದೇ ವರವಾಗಿ ಪರಿಗಣಿಸಬೇಕೆಂದು ಅವರು ಹೇಳಿದರು.
ಗಾಂಧಿ ಜಯಂತಿ ಅಂಗವಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ "ಹೆಣ್ಣುಮಕ್ಕಳನ್ನು ಉಳಿಸಿ"ಅಭಿಯಾನವನ್ನು ಉದ್ಘಾಟಿಸಿದ ಅವರು, ಬಾಲಕಿಯರನ್ನು ಬಾಲಕರಿಗೆ ಸಮಾನವಾಗಿ ಕಾಣಬಾರದು. ಅದು ನಮ್ಮ ದೌರ್ಬಲ್ಯ, ಯೋಚನೆ ಮತ್ತು ಜೀವನ ಮೌಲ್ಯವನ್ನು ತೋರಿಸುತ್ತದೆ ಎಂದು ಅವರು ನುಡಿದರು.
"ಇದು ನಾಚಿಕೆಗೇಡಿನ ವಿಷಯ. ಕುಸಿದ ಲಿಂಗ ಅನುಪಾತ ನಮ್ಮ ರಾಷ್ಟ್ರದ ಪ್ರಗತಿಪರ ರಾಜ್ಯಗಳಲ್ಲದೇ ಪ್ರಗತಿಪರ ಸಮಾಜದಲ್ಲಿ ಕೂಡ ಕಂಡುಬರುತ್ತದೆ" ಎಂದರು. ಅಭಿಯಾನಕ್ಕೆ ಪ್ರಥಮ ಸಹಿ ಮಾಡಿದ ರಾಷ್ಟ್ರಪತಿ ಶಿಕ್ಷಿತ ಮತ್ತು ಸಮಾಜದಲ್ಲಿ ಸ್ಥಾನಮಾನ ಹೊಂದಿದ ಜನರಲ್ಲೂ ಈ ವಿದ್ಯಮಾನ ಕಂಡುಬರುತ್ತಿರುವುದು ಕಳವಳಕಾರಿ ವಿಷಯ ಎಂದು ಅಭಿಪ್ರಾಯಪಟ್ಟರು. . ಕದಡಿದ ಲಿಂಗ ಅನುಪಾತವು ದೊಡ್ಡ ಸಮಸ್ಯೆಯಾಗಿದೆ. ಇದು ಅನೇಕ ಅಪರಾಧಗಳಿಗೆ ಎಡೆಮಾಡಬಹುದು ಮತ್ತು ಸಮಾಜದ ಸ್ಥಿರತೆ ಮತ್ತು ಭದ್ರತೆಗೆ ಒಳ್ಳೆಯದಲ್ಲ ಎಂದು ಹೇಳಿದರು.
ಕೇಂದ್ರ ಆರೋಗ್ಯ ಸಚಿವ ಅನ್ಬುಮಣಿ ರಾಮದಾಸ್ ಹೆಣ್ಣುಮಕ್ಕಳ ಕುಸಿತದ ಅನುಪಾತದ ಪ್ರಸಕ್ತ ಪ್ರವೃತ್ತಿಯಿಂದ ತಮಗೆ ನಾಚಿಕೆಯ ಭಾವನೆ ಮತ್ತು ತೀವ್ರ ಕಳವಳ ಉಂಟಾಗಿದೆ ಎಂದು ಹೇಳಿದರು.
|