ಇಡೀ ರಾಷ್ಟ್ರಕ್ಕೆ ವಿಸ್ತರಿಸಿರುವ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಭರವಸೆ ಕಾರ್ಯಕ್ರಮ ಯಶಸ್ವಿಯಾಗಲು ಸೋರಿಕೆಗಳು ಮತ್ತು ಆಡಳಿತ ಅಸಮರ್ಪಕತೆಗಳನ್ನು ಮುಚ್ಚಬೇಕೆಂದು ಪ್ರಧಾನಮಂತ್ರಿ ಮನಮೋಹನ ಸಿಂಗ್ ಬುಧವಾರ ತಿಳಿಸಿದರು.
ಈ ಕಾರ್ಯಕ್ರಮವನ್ನು ಪ್ರಾಮಾಣಿಕತೆಯಿಂದ ಅನುಷ್ಠಾನಕ್ಕೆ ತಂದರೆ ಗ್ರಾಮೀಣ ಆದಾಯವನ್ನು ಹೆಚ್ಚಿಸುತ್ತದೆ ಮತ್ತು ಕಡು ಬಡತನದ ಕಠಿಣ ಅಲುಗನ್ನು ಮೃದುಗೊಳಿಸುತ್ತದೆ ಎಂದು ಭಾರತೀಯ ಭಾಷಾ ಸುದ್ದಿಪತ್ರಿಕೆಗಳ ಸಂಘವನ್ನು ಉದ್ದೇಶಿಸಿ ಅವರು ಹೇಳಿದರು.
ಆದರೆ ಕಾರ್ಯಕ್ರಮದ ಯಶಸ್ಸಿಗೆ ಅಡ್ಡಿಯಾಗಿರುವ ಸೋರಿಕೆಗಳು ಮತ್ತು ಆಡಳಿತ ಅಸಮರ್ಪಕತೆಗಳ ಬಗ್ಗೆ ಗಮನಸೆಳೆದು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸುವುದು ಮಾಧ್ಯಮ ಮತ್ತು ನಾಗರಿಕ ಸಮಾಜದ ಕರ್ತವ್ಯ ಎಂದು ನುಡಿದರು.
ಕೆಳಮಟ್ಟದ ಕಾರ್ಯಕರ್ತರು ಅಭಿವೃದ್ಧಿಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲು ತೀವ್ರ ಆಸಕ್ತರಾಗಿದ್ದಾರೆ. ಈ ಕಾರ್ಯಕ್ರಮಗಳನ್ನು ಪ್ರಾಮಾಣಿಕವಾಗಿ ಅನುಷ್ಠಾನಗೊಳಿಸಿದರೆ ಮುಂದಿನ ಮೂರ್ನಾಲ್ಕು ವರ್ಷಗಳಲ್ಲಿ ಗ್ರಾಮೀಣ ಭಾರತವನ್ನು ಪರಿವರ್ತನೆ ಮಾಡುತ್ತದೆ ಎಂದು ಅವರು ಹೇಳಿದರು.
ಪ್ರಜಾಪ್ರಭುತ್ವದಲ್ಲಿ ಮಾಧ್ಯಮ ಕಾವಲುಸಮಿತಿಯ ಪಾತ್ರ ವಹಿಸಬೇಕು. ಸರ್ಕಾರ ಮಾಧ್ಯಮದ ಟೀಕೆ, ಸಲಹೆಗಳಿಂದ ಅನುಕೂಲ ಪಡೆಯುತ್ತದೆ ಎಂದು ಹೇಳಿದರು. ಇದು ಪ್ರಜಾಪ್ರಭುತ್ವದಲ್ಲಿ ಅಗತ್ಯವಾಗಿದೆ. ಆದಾಗ್ಯೂ, ಟೀಕೆಗಳು ಸಕಾರಾತ್ಮಕ ಪರಿವರ್ತನೆಗೆ ಉತ್ತೇಜಿಸಬೇಕು ಮತ್ತು ಜನರಿಗೆ ಆಶಾಭಾವನೆ ಮೂಡಿಸಬೇಕು ಎಂದು ಹೇಳಿದರು.
|