ಭಾರತ-ಅಮೆರಿಕ ಪರಮಾಣು ಒಪ್ಪಂದದ ಬಗ್ಗೆ ಮುಂದಿನ ಎರಡು ಸುತ್ತಿನ ಮಾತುಕತೆಯಲ್ಲಿ ಯುಪಿಎ ಸರ್ಕಾರದ ಜತೆ ಒಮ್ಮತ ಮೂಡಿಸುವ ಪ್ರಯತ್ನಗಳನ್ನು ನಡೆಸಲಾಗುವುದು ಎಂದು ಸಿಪಿಎಂ ಬುಧವಾರ ತಿಳಿಸಿದೆ.
ಸೋನಿಯಾ ಗಾಂಧಿ ನ್ಯೂಯಾರ್ಕ್‌ನಲ್ಲಿ ಭಾಷಣ ಮಾಡುವಾಗ ಪರಮಾಣು ಒಪ್ಪಂದದ ಬಗ್ಗೆ ಎಡಪಕ್ಷಗಳ ಆತಂಕವನ್ನು ಪ್ರಸ್ತಾಪಿಸಿದ್ದರಲ್ಲಿ ಯಾವ ತಪ್ಪೂ ಇಲ್ಲ ಎಂದೂ ಅದು ತಿಳಿಸಿದೆ.
"ಸೋನಿಯಾ ಹೇಳಿದ್ದರಲ್ಲಿ ತಪ್ಪೇನೂ ಇಲ್ಲ. ಒಪ್ಪಂದಕ್ಕೆ ಸಂಬಂಧಪಟ್ಟಂತೆ ಕೆಲವು ವಿಷಯಗಳಿದ್ದು, ಆ ಕುರಿತು ಮಾತುಕತೆ ನಡೆಸಲಾಗುತ್ತಿದೆ. ನಾವು ವಿಭಿನ್ನ ನಿಲುವುಗಳನ್ನು ಗೌರವಿಸಬೇಕಾಗುತ್ತದೆ" ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಕಾರಟ್ ವರದಿಗಾರರಿಗೆ ತಿಳಿಸಿದರು.
ಯುಪಿಎ-ಎಡಪಕ್ಷಗಳ ಕೂಟದ ನಡುವೆ ಒಪ್ಪಂದದ ಬಗ್ಗೆ ಯಾವಾಗ ಒಮ್ಮತ ಮೂಡುವುದೆಂದು ನಿರೀಕ್ಷಿಸಬಹುದು ಎಂದು ಪ್ರಶ್ನಿಸಿದಾಗ, ಯುಪಿಎ-ಎಡಪಕ್ಷಗಳ ಸಮಿತಿ ಅ.5ರಂದು ಬೇಟಿ ಮಾಡಲಿದೆ. ಮುಂದಿನ ಎರಡು ಸುತ್ತಿನ ಸಭೆಗಳಲ್ಲಿ ನಾವು ಒಮ್ಮತಕ್ಕೆ ಯತ್ನಿಸುತ್ತೇವೆ ಎಂದು ಕಾರಟ್ ಹೇಳಿದರು.
ಮಧ್ಯಪ್ರದೇಶ ಸಿಪಿಎಂ ಕಾರ್ಯದರ್ಶಿ ಬಿ.ಎಸ್. ದಾಕಡ್ ಸ್ಮರಣಾರ್ಥ ಆಯೋಜಿಸಿದ್ದ ಸಂತಾಪಸೂಚಕ ಸಭೆಯಲ್ಲಿ ಭಾಗವಹಿಸಲು ಕಾರಟ್ ಇಲ್ಲಿಗೆ ಆಗಮಿಸಿದ್ದರು.
|