ಲಿಂಗ ಅನುಪಾತದ ಕುಸಿತದಿಂದ ಮತ್ತು ಪ್ರತಿವರ್ಷ 10 ಲಕ್ಷ ಭ್ರೂಣಹತ್ಯೆಯಿಂದ ರಾಜಸ್ಥಾನ, ಪಂಜಾಬ್, ಹರ್ಯಾಣ ಮತ್ತು ದೆಹಲಿಯ ಕೆಲವು ಭಾಗಗಳಲ್ಲಿ ವಿವಾಹಕ್ಕೆ ಯುವತಿಯರ ಕೊರತೆ ಕಂಡುಬಂದಿದೆ ಎಂದು ಕೇಂದ್ರ ಸಚಿವೆ ರೇಣುಕಾ ಚೌಧುರಿ ಗುರುವಾರ ಇಲ್ಲಿ ತಿಳಿಸಿದರು.
ಇದೊಂದು ಕಳವಳಕಾರಿ ವಿಷಯವಾಗಿದ್ದು, ಹೆಣ್ಣು ಮಗುವಿನ ಹತ್ಯೆಯನ್ನು ನಿಲ್ಲಿಸಲು ಸರ್ಕಾರ ಕಠಿಣ ಕ್ರಮಗಳನ್ನು ಕೈಗೊಂಡಿದೆ ಎಂದು ಮಹಿಳೆ ಮತ್ತು ಮಕ್ಕಳ ಕಲ್ಯಾಣ ಸಚಿವೆ ಚೌಧುರಿ ವರದಿಗಾರರಿಗೆ ತಿಳಿಸಿದರು.
ವಯಸ್ಸಾದ ತಂದೆತಾಯಿಗಳನ್ನು ಮಕ್ಕಳು ನಿರ್ಲಕ್ಷಿಸುವ ಸಮಸ್ಯೆ ನಿವಾರಣೆಗೆ ಸರ್ಕಾರ ಕಾನೂನೊಂದನ್ನು ತರಲಿದೆ ಎಂದು ಅವರು ನುಡಿದರು. ಕಡುಬಡವರಿಗೆ ಮತ್ತು ಹಿರಿಯ ನಾಗರಿಕರಿಗೆ ಸರ್ಕಾರ ಪಿಂಚಣಿ ಹಣವನ್ನು ಸದ್ಯದಲ್ಲೇ ಏರಿಸಲಿದೆ ಎಂದೂ ಅವರು ತಿಳಿಸಿದರು.
ಕನಿಷ್ಠ ಪ್ರೌಢಶಾಲೆವರೆಗಾದರೂ ಮಕ್ಕಳು ಶಿಕ್ಷಣ ಪಡೆಯಬೇಕೆಂಬುದೇ ಮಧ್ಯಾಹ್ನದ ಬಿಸಿಯೂಟ ಯೋಜನೆಯ ಮುನ್ನೋಟವಾಗಿದೆ ಎಂದು ಸಚಿವೆ ಹೇಳಿದರು. ಯುಪಿಎ ಸರ್ಕಾರ ರಾಷ್ಟ್ರೀಯ ಮಕ್ಕಳ ಆಯೋಗ, ರಾಷ್ಟ್ರೀಯ ಮಹಿಳಾ ಆಯೋಗವನ್ನು ದಮನಿತರ, ಮಹಿಳೆಯರ, ಮಕ್ಕಳ ಸಾಮಾಜಿಕ ಅಭಿವೃದ್ಧಿಗೆ ರೂಪಿಸಿತು. ಅದರ ಫಲಶ್ರುತಿ ಈಗ ಕಾಣುತ್ತಿದೆ ಎಂದು ಅವರು ಹೇಳಿದರು.
|