ಪರಮಾಣು ಒಪ್ಪಂದ ವಿರೋಧಿಸುವವರ ವಿರುದ್ಧ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಟೀಕೆಗೆ ಎಡಪಕ್ಷಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿವೆ. ಕಾಂಗ್ರೆಸ್ ರಾಷ್ಟ್ರಕ್ಕೆ ಚುನಾವಣೆ ಇನ್ನೊಂದು ಹೇರಲು ಅಣಿಯಾಗುತ್ತಿದೆ ಎಂದೂ ಅವು ಆರೋಪಿಸಿವೆ.
ಅಮೆರಿಕದ ಜತೆ ಪರಮಾಣು ಒಪ್ಪಂದಕ್ಕೆ ತಮ್ಮ ವಿರೋಧವು ತಾತ್ವಿಕ ನಿಲುವಾಗಿದ್ದು, ಅದರ ಬಗ್ಗೆ ರಾಜಿ ಸಾಧ್ಯವಿಲ್ಲ ಎಂದು ಎಡಪಕ್ಷಗಳು ಹೇಳಿವೆ. ಪರಮಾಣು ಒಪ್ಪಂದವು ದೇಶದ ಹಿತಾಸಕ್ತಿಗೆ ಪೂರಕವಾಗಿಲ್ಲ ಎಂದು ಎಡಪಕ್ಷಗಳು ನಂಬಿವೆ.
ಕಾಂಗ್ರೆಸ್ ಚುನಾವಣೆಗೆ ಅಣಿಯಾಗುತ್ತಿದೆ. ರಾಷ್ಟ್ರದ ಮೇಲೆ ಚುನಾವಣೆಯನ್ನು ಬಲವಂತವಾಗಿ ಹೇರಲು ಕಾಂಗ್ರೆಸ್ ಬಯಸಿದೆ. ಸರ್ಕಾರ ಬಿದ್ದುಹೋಗಿ ರಾಷ್ಟ್ರದ ಮೇಲೆ ಚುನಾವಣೆ ಹೇರಿದರೆ ಕಾಂಗ್ರೆಸ್ ಅದಕ್ಕೆ ಜವಾಬ್ದಾರಿ ಆಗಬೇಕಾಗುತ್ತದೆ ಎಂದು ಸಿಪಿಐ ಪ್ರಧಾನಕಾರ್ಯದರ್ಶಿ ಎ.ಬಿ. ಬರ್ಧನ್ ಎಚ್ಚರಿಸಿದರು.
ಕಾಂಗ್ರೆಸ್‌ಗೆ ಬೆಂಬಲ ಹಿಂತೆಗೆದುಕೊಳ್ಳುತ್ತೇವೆಂದು ನಾವು ಹೇಳಿಯೇ ಇಲ್ಲ ಎಂದೂ ಬರ್ಧನ್ ಹೇಳಿದರು.ಸೋನಿಯಾ ಹೇಳಿಕೆಗೆ ಪ್ರತಿಕ್ರಿಯಿಸಿರುವ ಸಿಪಿಐ ಪ್ರಧಾನಕಾರ್ಯದರ್ಶಿ ಡಿ. ರಾಜಾ ಕಾಂಗ್ರೆಸ್ ಜನರ ಮೇಲೆ ಚುನಾವಣೆ ಹೇರುವಂತೆ ಕಾಣುತ್ತಿದೆ. ರಾಷ್ಟ್ರವನ್ನು ಇನ್ನೊಂದು ಚುನಾವಣೆಯಲ್ಲಿ ಮುಳುಗಿಸಿದರೆ ಎಡಪಕ್ಷಗಳು ಹೊಣೆಯಲ್ಲ ಎಂದು ಅವರು ನುಡಿದರು. ರಾಷ್ಟ್ರದ ಹಿತಾಸಕ್ತಿ ದೃಷ್ಟಿಯಿಂದ ಎಡಪಕ್ಷಗಳು ಒಪ್ಪಂದವನ್ನು ವಿರೋದಿಸುತ್ತಿವೆ.
ಶಾಂತಿ ಮತ್ತು ಅಭಿವೃದ್ಧಿ ಜತೆ ಗುರುತಿಸಿಕೊಂಡಿರುವ ನಾವು ಅಣ್ವಸ್ತ್ರ ನಿಶ್ಯಸ್ತ್ರೀಕರಣದ ವಿರುದ್ಧ ಹೋರಾಡುತ್ತಿದ್ದೇವೆ ಎಂದು ಹೇಳಿದರು.ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಹರ್ಯಾಣದಲ್ಲಿ ನಡೆದ ಸಾರ್ವಜನಿಕ ಸಭೆಯೊಂದರಲ್ಲಿ ಪರಮಾಣು ಒಪ್ಪಂದವನ್ನು ಬಲವಾಗಿ ಸಮರ್ಥಿಸಿಕೊಂಡು ರಾಷ್ಟ್ರದ ಪ್ರಗತಿಗೆ ಅಡ್ಡಿಯಾಗುತ್ತಿರುವ ಶಕ್ತಿಗಳು ಕಾಂಗ್ರೆಸ್‌ಗೆ ಮಾತ್ರ ಶತ್ರುವಲ್ಲ, ರಾಷ್ಟ್ರದ ಅಭಿವೃದ್ಧಿಗೆ ಶತ್ರುಗಳು ಎಂದು ಎಡಪಕ್ಷಗಳ ಮೇಲೆ ವಾಗ್ದಾಳಿ ನಡೆಸಿದ್ದರು.
|