ಭಾರತ-ಅಮೆರಿಕ ಪರಮಾಣು ಒಪ್ಪಂದ ಅನುಷ್ಠಾನ ಕುರಿತು ಎದ್ದಿರುವ ಆರೋಪ-ಪ್ರತ್ಯಾರೋಪ, ಅಸಮಾಧಾನ ಶಮನ ಕುರಿತಾಗಿ ಕೇಂದ್ರದ ಯುಪಿಎ ಸರಕಾರ ಮತ್ತು ಅದನ್ನು ಹೊರಗಿನಿಂದ ಬೆಂಬಲಿಸುತ್ತಿರುವ ಎಡಪಕ್ಷಗಳ ಮಧ್ಯೆ ಐದನೇ ಬಾರಿಗೆ ಮಂಗಳವಾರ ಮಾತುಕತೆ ನಡೆಯಲಿದೆ.
ಅಂತಾರಾಷ್ಟ್ರೀಯ ಅಣುಶಕ್ತಿ ಏಜೆನ್ಸಿಯ ಮುಖ್ಯಸ್ಥ ಭಾರತಕ್ಕೆ ಆಗಮಿಸಿರುವಂತೆಯೇ ಎಡಪಕ್ಷಗಳು ಮತ್ತು ಕಾಂಗ್ರೆಸ್ ನಡುವೆ ಮೈತ್ರಿ ಮುರಿದುಬೀಳುವ ಹಂತ ತಲುಪಿದ್ದು, ಉಭಯ ಬಣಗಳೂ ಈಗಾಗಲೇ ಚುನಾವಣೆಗೆ ಸಿದ್ಧ ಎಂದು ಘೋಷಿಸಿರುವ ಹಿನ್ನೆಲೆಯಲ್ಲಿ ಇಂದಿನ ಸಭೆ ಮಹತ್ವ ಪಡೆದುಕೊಂಡಿದೆ.
ಅಮೆರಿಕದ ಸ್ವದೇಶೀ ಕಾನೂನು ಮತ್ತು ಪರಮಾಣು ಒಪ್ಪಂದವು ಭಾರತದ ವಿದೇಶಾಂಗ ಮತ್ತು ಭದ್ರತಾ ನೀತಿಗಳ ಮೇಲೆ ಯಾವ ರೀತಿಯ ಪರಿಣಾಮ ಬೀರಲಿದೆ ಎಂಬುದು ಸಭೆಯಲ್ಲಿ ಚರ್ಚೆಗೆ ಬರಲಿದೆ.
ಪರಮಾಣಉ ಒಪ್ಪಂದ ವಿರೋಧಿಸುತ್ತಿರುವವರು ಕಾಂಗ್ರೆಸ್ಸನ್ನು ಮಾತ್ರವೇ ಅಲ್ಲ, ರಾಷ್ಟ್ರ ಅಭಿವೃದ್ಧಿಯನ್ನೂ ವಿರೋಧಿಸುತ್ತಿದ್ದಾರೆ ಎಂದು ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಹೇಳಿಕೆ ನೀಡಿದ ಬೆನ್ನಿಗೆ ಎಡಪಕ್ಷಗಳು ಈ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿ ವಾಗ್ದಾಳಿ ನಡೆಸಿದ್ದವು. ತಕ್ಷಣವೇ ಸ್ವಲ್ಪ ಮೆತ್ತಗಾದ ಕಾಂಗ್ರೆಸ್ ಕೂಡ ಈ ಕುರಿತು ಸ್ಪಷ್ಟನೆ ನೀಡಿ, ಸೋನಿಯಾ ಅವರು ಹರ್ಯಾಣದ ವಿಷಯಕ್ಕೆ ಸಂಬಂಧಿಸಿ ಮಾತ್ರ ಮಾತನಾಡುತ್ತಿದ್ದರು ಎಂದು ಹೇಳಿಕೆ ನೀಡಿತ್ತು.
|