ಕರ್ನಾಟಕದ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ರಾಜ್ಯಪಾಲರಿಗೆ ರಾಜೀನಾಮೆ ಪತ್ರ ಸಲ್ಲಿಸಿದ ಕೆಲವು ಗಂಟೆಗಳ ಬಳಿಕ ಕರ್ನಾಟಕದ ರಾಜಕೀಯ ಪರಿಸ್ಥಿತಿಯನ್ನು ಕುರಿತು ಚರ್ಚಿಸಲು ಸೋಮವಾರ ರಾತ್ರಿ ಕಾಂಗ್ರೆಸ್‌ನ ಮುಖ್ಯಸಮಿತಿ ಇಲ್ಲಿ ಸಭೆ ಸೇರಿತ್ತು.
ಸುಮಾರು 30 ನಿಮಿಷಗಳ ಕಾಲ ನಡೆದ ಸಭೆಯಲ್ಲಿ ಕರ್ನಾಟಕದ ರಾಜ್ಯಪಾಲ ರಾಮೇಶ್ವರ್ ಠಾಕೂರ್ ಕಳಿಸಿದ ವರದಿಯನ್ನು ಕುರಿತು ಸಭೆಯಲ್ಲಿ ಚರ್ಚಿಸಲಾಯಿತೆಂದು ಗೊತ್ತಾಗಿದೆ.
ಸರ್ಕಾರಕ್ಕೆ ಬಿಜೆಪಿ ಬೆಂಬಲ ಹಿಂತೆಗೆದುಕೊಂಡ ಹಿನ್ನೆಲೆಯಲ್ಲಿ ಕುಮಾರಸ್ವಾಮಿ ಸರ್ಕಾರ ಬಹುಮತ ಕಳೆದುಕೊಂಡ ಬಳಿಕದ ಪರಿಸ್ಥಿತಿ ಬಗ್ಗೆ ಠಾಕುರ್ ವಿಸ್ತೃತ ವರದಿ ನೀಡಿದ್ದರು. ಪ್ರಧಾನಮಂತ್ರಿ ಮನಮೋಹನ ಸಿಂಗ್ ಅವರ ನಿವಾಸದಲ್ಲಿ ಈ ಸಭೆ ನಡೆಯಿತೆಂದು ಹೇಳಲಾಗಿದೆ.
ಪ್ರಧಾನಮಂತ್ರಿ ಮತ್ತು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಲ್ಲದೇ ಹಿರಿಯ ಸಚಿವರಾದ ಪ್ರಣವ್ ಮುಖರ್ಜಿ, ಅರ್ಜುನ್ ಸಿಂಗ್, ಎ.ಕೆ. ಆಂಟೊನಿ, ಎಚ್.ಆರ್. ಭಾರದ್ವಾಜ್, ರಾಷ್ಟ್ರೀಯ ಭದ್ರತಾ ಸಲಹೆಗಾರ ಎಂ.ಕೆ. ನಾರಾಯಣನ್ ಮತ್ತು ಗೃಹಕಾರ್ಯದರ್ಶಿ ಮಧುಕರ್ ಗುಪ್ತಾ ಕೂಡ ಸಭೆಯಲ್ಲಿ ಭಾಗವಹಿಸಿದ್ದರು.
|