ಯುಪಿಎ ಮತ್ತು ಎಡಪಕ್ಷಗಳ ಉಭಯ ಕಡೆಗಳು ವಿಭಿನ್ನ ದೃಷ್ಟಿಕೋನವನ್ನು ಮಂಡಿಸುವುದರೊಂದಿಗೆ ಭಾರತ-ಅಮೆರಿಕ ಪರಮಾಣು ಒಪ್ಪಂದದ ಬಗ್ಗೆ ಯುಪಿಎ-ಎಡಪಕ್ಷಗಳ ಸಮಿತಿಯ ನಿರ್ಣಾಯಕ ಸಭೆ ಮಂಗಳವಾರ ಆರಂಭವಾಯಿತು. ಮಾತುಕತೆಯಲ್ಲಿ ಯಾವುದೇ ಸ್ಪಷ್ಟ ತೀರ್ಮಾನ ಆಗದಿದ್ದರಿಂದ ಮುಂದಿನ ಸುತ್ತಿನ ಚರ್ಚೆ ಅ.22ರಂದು ನಡೆಯಲಿದೆ.
ಐಎಇಎ ಜತೆ ಮಾತುಕತೆಗೆ ಅವಕಾಶ ನೀಡಬೇಕೆಂಬ ಸರ್ಕಾರದ ಕೋರಿಕೆಯನ್ನು ಎಡಪಕ್ಷಗಳು ತಿರಸ್ಕರಿಸಿದ ಬಳಿಕ ಪರಮಾಣು ಒಪ್ಪಂದಕ್ಕೆ ಸಂಬಂಧಪಟ್ಟಂತೆ ಉಭಯ ತಂಡಗಳ ನಡುವೆ ದೊಡ್ಡ ಬಿರುಕು ಉಂಟಾದ ನೇಪಥ್ಯದಲ್ಲಿ ಈ ಸಭೆ ನಡೆಯಿತು.
ಭಾರತದ ವಿದೇಶಿ ಮತ್ತು ರಕ್ಷಣಾ ನೀತಿಗಳನ್ನು ಅಮೆರಿಕದ ಹಿತಾಸಕ್ತಿಯೊಂದಿಗೆ ರಾಜಿಮಾಡಿಕೊಳ್ಳುವುದಿಲ್ಲ ಎಂದು ಭರವಸೆ ನೀಡಲು ಸಾಧ್ಯವೇ ಎಂದು ಎಡಪಕ್ಷವು ಸರ್ಕಾರಕ್ಕೆ ಸಲ್ಲಿಸಿರುವ ಟಿಪ್ಪಣಿಯಲ್ಲಿ ಕೇಳಿದೆ. ಈ ಟಿಪ್ಪಣಿಗೆ ಸರ್ಕಾರ ಕೂಡ ಉತ್ತರ ಕಳಿಸಿದೆಯೆಂದು ತಿಳಿದುಬಂದಿದೆ.
ಸಮಿತಿಯ ವರದಿ ಬರುವವರೆಗೆ ಐಎಇಎ ಜತೆ ಯಾವುದೇ ಮಾತುಕತೆಯನ್ನು ಸರ್ಕಾರ ಕೈಗೊಳ್ಳುವುದಿಲ್ಲ ಎಂದು ಎಡಪಕ್ಷಕ್ಕೆ ತಿಳಿಸಿದೆಯೆಂದು ಗೊತ್ತಾಗಿದೆ. ಈ ಕುರಿತು ಮಾತನಾಡಿದ ಸಿಪಿಐ ಪ್ರಧಾನಕಾರ್ಯದರ್ಶಿ ಎ.ಬಿ. ಬರ್ಧನ್ ಸಮಿತಿಯ ವರದಿ ಬರುವ ತನಕ ಐಎಇಎ ಜತೆ ಯಾವುದೇ ಮಾತುಕತೆ ಆರಂಭವಾಗುವುದೆಂದು ಭಾವಿಸುವುದಿಲ್ಲ ಎಂದು ತಿಳಿಸಿದರು.
ಈ ನಡುವೆ ಯುಪಿಎಯ ಮಿತ್ರಪಕ್ಷ ಆರ್‌ಜೆಡಿಯ ನಾಯಕ ಲಾಲು ಪ್ರಸಾದ್, ಕೇಂದ್ರ ಸರ್ಕಾರಕ್ಕೆ ಯಾವುದೇ ಬೆದರಿಕೆ ಇಲ್ಲ ಮತ್ತು ಸದ್ಯಕ್ಕೆ ಮಧ್ಯಂತರ ಚುನಾವಣೆಯ ಸಾಧ್ಯತೆಯಿಲ್ಲ ಎಂದು ಹೇಳಿದ್ದಾರೆ. ಲಾಲು ಪ್ರಸಾದ್ ಎರಡು ಕಡೆ ಮಧ್ಯಸ್ಥಿಕೆ ವಹಿಸಿ ರಾಜಿಗೆ ಯತ್ನಿಸುತ್ತಿದ್ದು, ಯುಪಿಎ-ಎಡಪಕ್ಷಗಳ ನಡುವೆ ಅ.22ರ ಚರ್ಚೆಯಲ್ಲಿ ಮುಂದಿನ ಪ್ರಗತಿಯನ್ನು ನಿರೀಕ್ಷಿಸಬಹುದು.
|