ಒರಿಸ್ಸಾದ ಕಿಯೊಂಜಾರ್ ಜಿಲ್ಲೆಯಲ್ಲಿ ಆಸ್ಟ್ರೇಲಿಯದ ಕ್ರೈಸ್ತ ಧರ್ಮ ಪ್ರಚಾರಕ ಗ್ರಹಾಮ್ ಸ್ಟೇನ್ಸ್ ಮತ್ತು ಅವರ ಇಬ್ಬರು ಮಕ್ಕಳನ್ನು ಹತ್ಯೆಮಾಡಿ ಜೀವಾವಧಿ ಶಿಕ್ಷೆಗೆ ಗುರಿಯಾದ ದಾರಾ ಸಿಂಗ್‌ಗೆ ಜಾಮೀನು ನೀಡಲು ಸುಪ್ರೀಂಕೋರ್ಟ್ ಮಂಗಳವಾರ ನಿರಾಕರಿಸಿದೆ.
ಜಾಮೀನು ನೀಡುವುದರಿಂದ ಯಾವ ಉದ್ದೇಶವೂ ಸಾಧನೆಯಾಗುವುದಿಲ್ಲ. ಏಕೆಂದರೆ ಫಾದರ್ ಅರುಲ್ ದಾಸ್ ಹತ್ಯೆ ಪ್ರಕರಣದಲ್ಲಿ ಕೂಡ ಅವನಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ ಎಂದು ನ್ಯಾಯಮೂರ್ತಿ ಅರಿಜಿತ್ ಪಸಾಯತ್ ತಿಳಿಸಿದರು.
ತನ್ನ ವಯಸ್ಸಾದ ತಾಯಿ ಕಾಯಿಲೆ ಬಿದ್ದಿರುವುದರಿಂದ ರವೀಂದ್ರ ಪಾಲ್ ಸಿಂಗ್ ಅಲಿಯಾಸ್ ದಾರಾಸಿಂಗ್ ಜಾಮೀನು ಕೋರಿದ್ದನು. ದಾರಾಸಿಂಗ್ ಈಗಾಗಲೇ 7 ವರ್ಷಗಳಿಂದ ಜೈಲುಶಿಕ್ಷೆ ಅನುಭವಿಸಿದ್ದಾನೆಂದು ಅವನ ಪರ ವಕೀಲ ಸಿಬು ಶಂಕರ್ ಮಿಶ್ರಾ ತಿಳಿಸಿದರು.
ಸೆಪ್ಟೆಂಬರ್ 2003ರಲ್ಲಿ ಖುರ್ದಾ ಸೆಷನ್ಸ್ ಕೋರ್ಟ್ ಎಲ್ಲ 14 ಆರೋಪಿಗಳಿಗೆ ಶಿಕ್ಷೆ ವಿಧಿಸಿ, ದಾರಾಸಿಂಗ್ ಮತ್ತು ಹೆಂಬ್ರೋಮ್‌ಗೆ ಮರಣದಂಡನೆ ಶಿಕ್ಷೆ ಮತ್ತು ಉಳಿದವರಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು. ಒರಿಸ್ಸಾ ಹೈಕೋರ್ಟ್ ಅವರಿಬ್ಬರ ಮರಣದಂಡನೆ ಶಿಕ್ಷೆಯನ್ನು ಬಳಿಕ ಜೀವಾವಧಿ ಶಿಕ್ಷೆಗೆ ಪರಿವರ್ತಿಸಿ ಉಳಿದವರನ್ನು ಖುಲಾಸೆಗೊಳಿಸಿತ್ತು.
|