ಪರಮಾಣು ಒಪ್ಪಂದದ ಬಗ್ಗೆ ಯುಪಿಎ ಮತ್ತು ಎಡಪಕ್ಷಗಳ ನಡುವೆ ಭಿನ್ನಾಭಿಪ್ರಾಯವಿದ್ದರೂ ಮನಮೋಹನ ಸಿಂಗ್ ಸರ್ಕಾರ ಉರುಳುವುದಿಲ್ಲ ಎಂದು ಕೇಂದ್ರ ಕೃಷಿ ಸಚಿವ ಶರದ್ ಪವಾರ್ ಗುರುವಾರ ಆಶಯ ವ್ಯಕ್ತಪಡಿಸಿದ್ದಾರೆ.
ಪರಮಾಣು ಒಪ್ಪಂದದ ಕೆಲವು ನಿಯಮಗಳ ಬಗ್ಗೆ ಯುಪಿಎ ಮತ್ತು ಮಾಕ್ಸ್‌ವಾದಿಗಳ ನಡುವೆ ಕೆಲವು ಸಮಸ್ಯೆಗಳಿರುವುದು ನಿಜ. ಎಡಪಕ್ಷಗಳು ಈ ಬಗ್ಗೆ ಧ್ವನಿ ಎತ್ತಿದ್ದರೂ ಈ ವಿಷಯದ ಬಗ್ಗೆ ಸರ್ಕಾರ ಬೀಳುವುದಿಲ್ಲ ಎಂದು ಪತ್ರಿಕಾಗೋಷ್ಠಿಯಲ್ಲಿ ಅವರು ನುಡಿದರು.
ಭಿನ್ನಾಭಿಪ್ರಾಯ ನಿವಾರಣೆಗೆ ಯುಪಿಎ-ಎಡಪಕ್ಷಗಳ ಸಮಿತಿ ರಚಿಸಲಾಗಿದೆ. ಈ ಸಮಿತಿಯು ನಾಲ್ಕು ಸುತ್ತಿನ ಮಾತುಕತೆ ನಡೆಸಿದ್ದು, ಎರಡೂ ಕಡೆಯವರು ಸೌಹಾರ್ದದಿಂದ, ಪೂರ್ಣ ಜವಾಬ್ದಾರಿಯಿಂದ ಸಮಸ್ಯೆ ಇತ್ಯರ್ಥ ಮಾಡುತ್ತಾರೆಂದು ಅವರು ಆಶಿಸಿದರು.
ವಿದರ್ಭ ಸೇರಿದಂತೆ ಹಲವಾರು ರಾಜ್ಯಗಳಲ್ಲಿ ರೈತರ ಆತ್ಮಹತ್ಯೆಗಳನ್ನು ಕುರಿತು ಪ್ರಶ್ನಿಸಿದ ಅವರು, ರೈತರ ಆರ್ಥಿಕ ಪರಿಸ್ಥಿತಿ ಸುಧಾರಣೆಗೆ ಸರ್ಕಾರ 16,000 ಕೋಟಿ ರೂ. ಕಾರ್ಯಕ್ರಮವನ್ನು ಆರಂಭಿಸಿದೆ ಎಂದು ಹೇಳಿದರು.
|