ಮುಸ್ಲಿಂರ ಪವಿತ್ರ ಸ್ಥಳವಾದ ಅಜ್ಮೀರ್ ಖಾಜಾ ಮೊಯಿನೊದ್ದಿನ್ ಚಿಸ್ತಿ ದರ್ಗಾದ ಆವರಣದಲ್ಲಿ ಬಾಂಬ್ ಸಿಡಿದ ಹಿನ್ನೆಲೆಯಲ್ಲಿ ಮೂರು ಮಂದಿ ಸಾವನ್ನಪ್ಪಿದ್ದು, 18 ಮಂದಿ ಗಾಯಗೊಂಡಿದ್ದಾರೆ ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ.
ಸಂಜೆಯ ವೇಳೆ ಇಫ್ತಾರ್‌ಕೂಟ ನಡೆಯುತ್ತಿರುವ ಸಂದರ್ಭದಲ್ಲಿ ಈ ಘಟನೆ ಸಂಭವಿಸಿದ್ದು, ಮೂವರು ಸಾವನ್ನಪ್ಪಿದ್ದು, 18 ಮಂದಿ ಗಾಯಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಸ್ಪೋಟಕವನ್ನು ಟಿಫಿನ್ ಬಾಕ್ಸ್‌ನಲ್ಲಿ ಅಡಗಿಸಿ ಇಡಲಾಗಿತ್ತೆಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಗಾಯಾಳುಗಳನ್ನು ಸಮೀಪದ ಜೆಎಲ್‌ಎನ್ ಆಸ್ಪತ್ರೆಗೆ ಸೇರಿಸಲಾಗಿದೆ. ಸ್ಪೋಟದ ಸುದ್ದಿ ತಿಳಿಯುತ್ತಿದ್ದಂತೆ ದರ್ಗಾದ ಸುತ್ತಲು ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಆದರೆ ಸ್ಪೋಟದಿಂದ ದರ್ಗಾಗೆ ಯಾವುದೇ ರೀತಿಯ ಹಾನಿಯಾಗಿಲ್ಲವೆಂದು ದರ್ಗಾದ ಅಡಳಿತದ ಮೂಲಗಳು ತಿಳಿಸಿವೆ.
ಅಂಗಡಿ ಮುಗ್ಗಟ್ಟುಗಳನ್ನು ಬಂದ್ ಮಾಡಿ ದರ್ಗಾದ ಸುತ್ತಲು ನೆರೆದಿದ್ದ ಭಕ್ತರನ್ನು ಹೊರಗೆ ಕಳುಹಿಸುವ ಪ್ರಯತ್ನ ಸಫಲವಾಯಿತು. ಸದಾ ಭಕ್ತರಿಂದ ತುಂಬಿ ತುಳುಕುತ್ತಿರುವ ದರ್ಗಾ ರಂಜಾನ್ ಹಬ್ಬದ ನಿಮಿತ್ಯ ಹೆಚ್ಚಿನ ಭಕ್ತರು ದರ್ಗಾದ ಭೇಟಿಗೆ ಆಗಮಿಸಿದ್ದರು ಎನ್ನಲಾಗಿದೆ.
ಸಂಜೆಯ ವೇಳೆಯಲ್ಲಿ ಸುಮಾರು ಐದು ಸಾವಿರಕ್ಕೂ ಹೆಚ್ಚಿನ ಭಕ್ತರು ದರ್ಗಾದ ಆವರಣದಲ್ಲಿ ಪ್ರಾರ್ಥನೆ ಸಲ್ಲಿಸಲು ಸೇರಿದ್ದರಿಂದ ಪೊಲೀಸರಿಗೆ ಭಕ್ತರಿಗೆ ಸೂಕ್ತ ರಕ್ಷಣೆ ನೀಡುವಲ್ಲಿ ಶ್ರಮಿಸಬೇಕಾಯಿತು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಘಟನೆಯ ವಿವರ ತಿಳಿಯುತ್ತಿದ್ದಂತೆ ಕೇಂದ್ರ ಗೃಹ ಸಚಿವಾಲಯ ಕಾರ್ಯದರ್ಶಿಗಳು ರಾಜಸ್ಥಾನದ ಡಿಜಿಪಿಯವರೊಂದಿಗೆ ಪರಿಸ್ಥಿತಿ ಕುರಿತಂತೆ ಚರ್ಚೆ ನಡೆಸಿ ಉನ್ನತ ಪೊಲೀಸ್ ಅಧಿಕಾರಿಗಳ ತುರ್ತು ಸಭೆ ನಡೆದು ರಾಜ್ಯದಾದ್ಯಂತ ಕಟ್ಟೆಚ್ಚರ ಘೋಷಿಸಲಾಯಿತು.
ಯಾವುದೇ ಪರಿಸ್ಥಿತಿಯನ್ನು ಎದುರಿಸಲು ಕ್ಷಿಪ್ರ ಕಾರ್ಯಾಚರಣೆ ದಳ ಕೇಂದ್ರೀಯ ಪೊಲೀಸ್ ಪಡೆಗಳನ್ನು ಭಧ್ರತೆಗಾಗಿ ನಿಯೋಜಿಸಲಾಗಿದೆ. ದೇಶದಾದ್ಯಂತ ಧಾರ್ಮಿಕ ಸ್ಥಳಗಳಿಗೆ ರಕ್ಷಣೆ ನೀಡುವಂತೆ ಎಲ್ಲ ರಾಜ್ಯ ಸರಕಾರಗಳಿಗೆ ಸೂಚಿಸಲಾಗಿದೆ ಎಂದು ಕೇಂದ್ರ ಗೃಹ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.
|