ಉತ್ತರಖಂಡದ ಛಾಮೋಲಿ ಜಿಲ್ಲೆಯಲ್ಲಿ ಬಸ್ಸೊಂದು ಅಲಕಾನಂದ ನದಿಗೆ ಉರುಳುಬಿದ್ದು, ಒರಿಸ್ಸಾದ 41 ಮಂದಿ ಬದ್ರಿನಾಥ ಯಾತ್ರಿಕರು ಸತ್ತಿರುವ ದುರದೃಷ್ಟಕರ ಘಟನೆ ಗುರುವಾರ ಸಂಜೆ ಸಂಭವಿಸಿದೆ.
ಈ ಅಪಘಾತ ವಿಷ್ಣುಪ್ರಯಾಗದಲ್ಲಿ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದು, 45 ಪ್ರಯಾಣಿಕರನ್ನು ಒಯ್ಯುತ್ತಿದ್ದ ಬಸ್ ಭೂಕುಸಿತದಿಂದ ಬೆಟ್ಟವೊಂದರಿಂದ ಉರುಳಿಬಿದ್ದಿದ್ದ ಬಂಡೆಯೊಂದಕ್ಕೆ ಡಿಕ್ಕಿ ಹೊಡೆದು ನಿಯಂತ್ರಣ ತಪ್ಪಿತೆಂದು ಹೇಳಲಾಗಿದೆ.
ನಿಯಂತ್ರಣ ತಪ್ಪಿದ ಬಸ್ ಗಂಗಾನದಿಯ ಉಪನದಿಯಾದ ಅಲಕಾನಂದ ನದಿಯ ನೀರಿಗೆ ಬಿದ್ದು, ಬಸ್‌ನಲ್ಲಿದ್ದ ಬಹುತೇಕ ಮಂದಿ ಸ್ಥಳದಲ್ಲೇ ಸತ್ತಿದ್ದಾರೆಂದು ಹೇಳಲಾಗಿದೆ. 41 ದೇಹಗಳನ್ನು ರಕ್ಷಣಾ ಪಡೆ ಹೊರತೆಗೆದಿದೆಯೆಂದು ಹೇಳಲಾಗಿದೆ.
ಇಬ್ಬರನ್ನು ರಕ್ಷಿಸಿ ಸಮೀಪದ ಆಸ್ಪತ್ರೆಗೆ ಸಾಗಿಸಲಾಯಿತು. ಅವರ ಪರಿಸ್ಥಿತಿ ಚಿಂತಾಜನಕವಾಗಿದೆಯೆಂದು ಹೇಳಲಾಗಿದೆ. ಹಿರಿಯ ಆಡಳಿತ ಮತ್ತು ಪೊಲೀಸ್ ಅಧಿಕಾರಿಗಳು ಅಪಘಾತದ ಸ್ಥಳಕ್ಕೆ ಧಾವಿಸಿ, ಕಾರ್ಯಾಚರಣೆಯ ಮೇಲ್ವಿಚಾರಣೆ ವಹಿಸಿದ್ದು, ದೇಹಗಳನ್ನು ಹೊರತೆಗೆಯಲು ಉದ್ದನೆಯ ಹಗ್ಗಗಳನ್ನು ಬಳಸಲಾಗುತ್ತಿದೆ.
ಒರಿಸ್ಸಾದ ಯಾತ್ರಿಗಳು ಗರ್ವಾಲ್ ಹಿಮಾಲಯದಲ್ಲಿ 3,133 ಮೀಟರ್ ಎತ್ತರದಲ್ಲಿರುವ ಬದ್ರಿನಾಥ ಮಂದಿರಕ್ಕೆ ಭೇಟಿ ನೀಡಿ ರಿಷಿಕೇಶಕ್ಕೆ ಹಿಂತಿರುಗುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ.
|