ಭಾರತ-ಅಮೆರಿಕ ಪರಮಾಣು ಒಪ್ಪಂದ ವಿಫಲವಾದರೆ ಅದು ಜೀವನದ ಅಂತ್ಯವಲ್ಲ ಎಂದು ಹೇಳಿರುವ ಪ್ರಧಾನಿ ಮನಮೋಹನ ಸಿಂಗ್, ತಮ್ಮ ಸರ್ಕಾರವು ಪೂರ್ಣಾವಧಿ ಪೂರೈಸುತ್ತದೆ ಎಂದು ಹೇಳುವ ಮೂಲಕ ಮಧ್ಯಂತರ ಚುನಾವಣೆಯ ಊಹಾಪೋಹಗಳನ್ನು ಬದಿಗಿರಿಸಿದ್ದಾರೆ.
ಪರಮಾಣು ಒಪ್ಪಂದವನ್ನು ಗೌರವಾನ್ವಿತ ಮತ್ತು ಭಾರತಕ್ಕೆ ಒಳಿತಾಗುವಂತಹದ್ದು ಎಂದು ಅವರು ಸಮರ್ಥಿಸಿಕೊಂಡರು. ಎಡಪಕ್ಷಗಳ ಅಪಸ್ವರದ ಶಮನಕ್ಕೆ ಪ್ರಯತ್ನಿಸಲಾಗುತ್ತಿದೆ ಎಂದು ಹೇಳಿದ ಅವರು, ತಾವು ಆಶಾವಾದ ಕೈಬಿಟ್ಟಿಲ್ಲ ಎಂದು ಹೇಳಿದರು.
ಹಿಂದುಸ್ತಾನ್ ಟೈಮ್ಸ್ ನಾಯಕತ್ವ ಶೃಂಗಸಭೆಯಲ್ಲಿ ಸಂವಾದಿಸುತ್ತಿದ್ದ ಅವರು, ಚುನಾವಣೆ ಇನ್ನೂ ದೂರವಿದೆ. ಸರ್ಕಾರ ಅಧಿಕಾರಾವಧಿ ಪೂರೈಸಲು ಇನ್ನೂ ಒಂದೂವರೆ ವರ್ಷವಿದೆ. ಅಲ್ಲಿಯವರೆಗೆ ನಾವು ಸರ್ಕಾರ ನಡೆಸುವುದಾಗಿ ಆಶಯ ವ್ಯಕ್ತಪಡಿಸಿದರು.
ಒಪ್ಪಂದ ವಿಫಲವಾದರೆ ಅವರ ವೈಯಕ್ತಿಕ ಪ್ರತಿಷ್ಠೆಗೆ ಕುಂದುಂಟಾಗಿ ದುರ್ಬಲ ಪ್ರಧಾನಿ ಎನಿಸುತ್ತಾರೆಂಬ ಚಿಂತೆಯಿದೆಯೇ ಎಂಬ ಪ್ರಶ್ನೆಗೆ, ಒಪ್ಪಂದ ಕಾರ್ಯಗತವಾಗದಿದ್ದರೆ, ಅದು ನಿರಾಶೆದಾಯಕ. ಆದರೆ ಜೀವನದಲ್ಲಿ ಕೆಲವು ನಿರಾಶೆಗಳನ್ನು ಎದುರಿಸಬೇಕಾದರೂ ಮುಂದಿನ ದಾರಿ ಕಂಡುಕೊಳ್ಳಬೇಕು ಎಂದು ಪ್ರಧಾನಿ ಮಾರ್ಮಿಕವಾಗಿ ನುಡಿದರು.
|