ಲುಧಿಯಾನಾದ ಮಲ್ಟಿಪ್ಲೆಕ್ಸ್ ಸಿನಿಮಾ ಹಾಲ್‌ನಲ್ಲಿ ಭಾನುವಾರ ಸಂಜೆ ಬಾಂಬ್ ಸ್ಫೋಟಗೊಂಡ ಪರಿಣಾಮವಾಗಿ ಆರು ಜನರು ಮೃತಪಟ್ಟಿದ್ದು, 32ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.ಜನಮ್ ಜನಮ್ ಕೆ ಸಾತ್ ಸಿನಿಮಾದ ಏಳು ಗಂಟೆ ಪ್ರದರ್ಶನವನ್ನು ವೀಕ್ಷಿಸುತ್ತಿದ್ದ ಸಂದರ್ಭದಲ್ಲಿ ಈ ಸ್ಫೋಟ ಸಂಭವಿಸಿತು ಎಂದು ಡಿಐಜಿ ಈಶ್ವರ್ ಸಿಂಗ್ ತಿಳಿಸಿದ್ದಾರೆ.
ಶರ್ಮಲಾ ರಸ್ತೆಯಲ್ಲಿರುವ ಪ್ರಮುಖ ಚಿತ್ರಮಂದಿರದಲ್ಲಿ ನಡೆದ ಈ ಸ್ಫೋಟಕ್ಕೆ ನಿಖರವಾದ ಕಾರಣ ತಿಳಿಯಲಿಲ್ಲ.
ಸ್ಕ್ರೀನ್ ಸಮೀಪವಿರುವ ಮುಂದಿನ ಸಾಲಿನ ಮೊದಲನೇ ಮತ್ತು ಎರಡನೇ ಸೀಟಿನ ನಡುವಿನಲ್ಲಿ ಬಾಂಬ್ ಸ್ಫೋಟವಾಗಿತ್ತು ಎಂದು ವರದಿಗಳು ತಿಳಿಸಿವೆ.ಗಾಯಾಳುಗಳನ್ನು ಕ್ರಿಸ್ಟಿಯನ್ ಮೆಡಿಕಲ್ ಆಸ್ಪತ್ರೆ ಮತ್ತು ಸಿವಿಲ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಹತ್ತುಮಂದಿಯ ಸ್ಥಿತಿಯು ಗಂಭೀರವಾಗಿದೆ.
ಈ ಸ್ಫೋಟದಲ್ಲಿ ಭಯೋತ್ಪಾದಕರ ಕೈವಾಡವಿರುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ ಎಂದು ಪೋಲೀಸರು ತಿಳಿಸಿದ್ದಾರೆ.
ಘಟನೆಯಲ್ಲಿ ಸ್ಥಳದಲ್ಲೇ ನಾಲ್ಕು ಮಂದಿ ಮೃತಪಟ್ಟಿದ್ದು, ಇಬ್ಬರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎಂದು ಡಿಜಿಪಿ ಎಂ.ಪಿ.ಸಿಂಗ್ ಹೇಳಿದ್ದು, ಇಂಟರ್ವಲ್ ಸಮಯದಲ್ಲಿ ಒಬ್ಬ ವ್ಯಕ್ತಿಯು ಚಿತ್ರಮಂದಿರದೊಳಗೆ ಪ್ರವೇಶಿಸಿದ್ದ ಎಂದು ಹೇಳಿದ್ದಾರೆ.
ಘಟನೆಯ ಸಂಪೂರ್ಣ ಚಿತ್ರಣದ ಬಗ್ಗೆ ಕೇಂದ್ರವು ಪಂಜಾಬ್ ಸರಕಾರದ ಅಧಿಕಾರಿಗಳೊಡನೆ ಮಾತುಕತೆ ನಡೆಸಿದ್ದಾರೆ ಎಂದು ಯೂನಿಯನ್ ಗೃಹ ಸಚಿವಾಲಯದ ಅಧಿಕೃತ ಮೂಲಗಳು ತಿಳಿಸಿವೆ.
|