ಬಿಜೆಪಿ ನಾಯಕ ಪ್ರಮೋದ್ ಮಹಾಜನ್ ಹತ್ಯೆ ಪ್ರಕರಣದಲ್ಲಿ ಸೋಮವಾರ ಸಾಕ್ಷ್ಯ ನುಡಿಯುವಾಗ ಅವರ ಪುತ್ರಿ ಪೂನಮ್ ಮಹಾಜನ್ ಸೆಷನ್ಸ್ ಕೋರ್ಟ್ ಎದುರು ದುಃಖಪೂರಿತರಾಗಿ ಬಿಕ್ಕಳಿಸಿದ ಘಟನೆ ನಡೆದಿದೆ.
ತನ್ನ ಚಿಕ್ಕಪ್ಪ ಹಾಗೂ ಪ್ರಮೋದ್ ಹತ್ಯೆಯ ಮುಖ್ಯ ಆರೋಪಿ ಪ್ರವೀಣ್ ಮಹಾಜನ್ ತನ್ನ ತಂದೆಗೆ ಎಸ್‌ಎಂಎಸ್ ಕಳಿಸಿ, "ನಿಮ್ಮಲ್ಲಿ ಕೋರಿಕೊಳ್ಳುವುದು ಏನೂ ಇಲ್ಲ. ಯುದ್ಧ ನಡೆಯಲಿದೆ"ಎಂದು ತಿಳಿಸಿದ್ದರೆಂದು ಪೂನಂ ಕೋರ್ಟ್ ಎದುರು ಹೇಳಿದರು.
ಪ್ರಮೋದ್ ಅಳಿಯ ಗೋಪಿನಾಥ್ ಮುಂಡೆ ಕೋರ್ಟ್ ಎದುರು ಸಾಕ್ಷ್ಯ ನುಡಿಯುವಾಗ ಪ್ರವೀಣ್ ಪ್ರಮೋದ್‌ರಿಗೆ ಒಂದು ಕೋಟಿ ರೂ,ನೀಡುವಂತೆ ಒತ್ತಾಯಿಸಿದ್ದನ್ನು ಪ್ರಮೋದ್ ನಿರಾಕರಿಸಿದ್ದರೆಂದು ಕೋರ್ಟ್‌ಗೆ ತಿಳಿಸಿದ್ದರು. ಇದಾದ ಬಳಿಕ ಪ್ರವೀಣ್ ಪ್ರಮೋದ್‌ಗೆ ಸಂದೇಶ ಕಳಿಸಿದ್ದು, ಈ ಸಂದೇಶವನ್ನು ಮೊಬೈಲ್ ಫೋನ್ ಕಂಪನಿಗಳ ದಾಖಲೆಗಳಿಂದ ಪತ್ತೆಹಚ್ಚಲಾಗಿದೆ.
ಈ ಹಿನ್ನೆಲೆಯಲ್ಲಿ ಪೂರಕ ಆರೋಪಪಟ್ಟಿಯನ್ನು ಇದಕ್ಕೆ ಸಂಬಂಧಿಸಿದಂತೆ ಸಲ್ಲಿಸಲಾಗಿದೆ. ವರದಿಗಳ ಪ್ರಕಾರ, ಅಂತಿಮ ತೀರ್ಪನ್ನು ದಿವಾಳಿ ಉತ್ಸವ ಮುಗಿದ ಬಳಿಕ ಡಿಸೆಂಬರ್‌ನಲ್ಲಿ ಪ್ರಕಟಿಸಲಾಗುವುದೆಂದು ನಿರೀಕ್ಷಿಸಲಾಗಿದೆ.
ಪ್ರವೀಣ್ ಗುಂಡು ಹಾರಿಸಿದ ಬಳಿಕ ಪ್ರಮೋದ್‌ಗೆ ಶಸ್ತ್ರಕ್ರಿಯೆ ನಡೆಸಿದ ಡಾ. ಗುಸ್ತಾದ್ ದಾವರ್ ಮತ್ತು ಮತ್ತು ಪ್ರವೀಣ್ ಮನೆಯ ಪಂಚನಾಮೆ ನಡೆಸಿದ ಪೊಲೀಸ್ ಇನ್ಸ್‌ಪೆಕ್ಟರ್ ಎ.ಎಸ್. ಕಾಟ್ಕರ್ ಶುಕ್ರವಾರ ಕೋರ್ಟ್‌ಗೆ ಸಾಕ್ಷ್ಯ ನುಡಿದಿದ್ದರು. ಪೂನಮ್ ಮಹಾಜನ್ ಸಾಕ್ಷ್ಯದ ಬಳಿಕ ಅವರನ್ನು ಪಾಟೀ ಸವಾಲಿಗೆ ಗುರಿಪಡಿಸಲಾಗುವುದು ಎಂದು ವಿಶೇಷ ಪ್ರಾಸಿಕ್ಯೂಟರ್ ಉಜ್ವಲ್ ನಿಕಮ್ ತಿಳಿಸಿದರು.
|