ಪಶ್ಚಿಮದೆಹಲಿಯಲ್ಲಿ ಮಹಿಳೆಯರ ಮೇಲೆ ಮಾರಣಾಂತಿಕ ದಾಳಿ ಘಟನೆಗಳು ನಡೆಯುತ್ತಿರುವ ಬಗ್ಗೆ ಕಳವಳಪಟ್ಟಿರುವ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಪೊಲೀಸರು ಪ್ರಕರಣ ಭೇದಿಸಲು ವಿಫಲವಾದರೆ ಸ್ವತಂತ್ರ ತನಿಖೆ ನಡೆಸುವುದಾಗಿ ಹೇಳಿದ್ದಾರೆ. ಪಶ್ಚಿಮ ದೆಹಲಿಯ ಬಲ್ಜೀತ್ ನಗರದ ನಿವಾಸವೊಂದರಲ್ಲಿ ಮಹಿಳೆಯೊಬ್ಬರ ತಲೆ ಜಜ್ಜಿ ಹತ್ಯೆ ಮಾಡಿರುವುದು ಪತ್ತೆಯಾದ ಬಳಿಕ ಅವರ ಹೇಳಿಕೆ ಹೊರಬಿದ್ದಿದೆ.
ಕಳೆದ 2 ತಿಂಗಳಲ್ಲಿ ಈ ಪ್ರದೇಶದಲ್ಲಿ ಸಂಭವಿಸುತ್ತಿರುವ ಐದನೇ ಹತ್ಯೆ ಇದಾಗಿದ್ದು, ಮನೋವಿಕಲ್ಪನು ಸರಣಿ ಕೊಲೆಯಲ್ಲಿ ಕೈವಾಡ ನಡೆಸಿರಬಹುದೆಂದು ಶಂಕಿಸಿದ್ದಾರೆ. ಆದಾಗ್ಯೂ, ಪೊಲೀಸರು ಇದನ್ನು ನಿರಾಕರಿಸಿದ್ದು, ದರೋಡೆಗೆ ಯತ್ನಿಸುವಾಗ ಈ ಘಟನೆ ಸಂಭವಿಸಿದೆ ಎಂದು ಹೇಳಿದ್ದಾರೆ.
ಕಮಲಾ ಎಂಬವರು ತಮ್ಮ ಮನೆಯಲ್ಲಿ ಮಲಗಿದ್ದಾಗ ಕಲ್ಲಿನಿಂದ ಜಜ್ಜಿ ಅವರ ಹತ್ಯೆ ಮಾಡಲಾಗಿತ್ತು. ತೀವ್ರವಾಗಿ ಗಾಯಗೊಂಡಿದ್ದ ಅವರನ್ನು ದೀನ್ ದಯಾಳ್ ಆಸ್ಪತ್ರೆಗೆ ಸೇರಿಸಿದರೂ ಅಲ್ಲಿ ಅವರು ಮೃತಪಟ್ಟರೆಂದು ವೈದ್ಯರು ಘೋಷಿಸಿದರು.
ಮುಂದುವರಿದ ಹತ್ಯೆಗಳ ಬಗ್ಗೆ ಸ್ಥಳೀಯರು ಬೀದಿಗಳಿದು ನಗರ ಪೊಲೀಸರ ವಿರುದ್ಧ ಘೋಷಣೆ ಕೂಗಿದರು. ಸಂಗೀತ ಎಂಬ ಯುವತಿ ಸೆ.22ರಂದು ಇದೇ ರೀತಿ ಮೃತಪಟ್ಟಿದ್ದಳು. ಆದರೆ ಸ್ಥಳೀಯರು ಶಂಕಿಸಿದಂತೆ ಯಾವುದೇ ಮನೋವಿಕಲ್ಪ ವ್ಯಕ್ತಿ ಈ ಕೊಲೆಯ ಹಿಂದಿಲ್ಲ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.
|