ನಾಗರಿಕ ಅಣು ಒಪ್ಪಂದದ ವಿಚಾರದಲ್ಲಿ ರೆಡಿಫ್ ಅಂತರ್ಜಾಲ ಸುದ್ದಿ ಮಾದ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ತಲೆ ಇಲ್ಲದ ಕೋಳಿ ಹೇಳಿಕೆ ನೀಡಿ ವಿವಾದಕ್ಕೆ ಕಾರಣರಾಗಿದ್ದ ಅಮೆರಿಕದಲ್ಲಿರುವ ಭಾರತೀಯ ರಾಯಭಾರಿ ರೋನೆನ್ ಸೇನ್ ಅವರನ್ನು ಭಾರತೀಯ ಸಂಸತ್ತಿನ ಹಕ್ಕು ಬಾದ್ಯತಾ ಸ್ಪಷ್ಟೀಕರಣಕ್ಕೆ ಕರೆಸಿಕೊಂಡಿದೆ.
ರಾಜ್ಯ ಸಭೆಯ ಹಕ್ಕು ಬಾದ್ಯತಾ ಸಮಿತಿಯು ಸೋಮವಾರ ಈ ನಿರ್ಧಾರ ತೆಗೆದುಕೊಂಡಿದೆ. ಸಮಿತಿಯ ಸಭೆಯ ಅದ್ಯಕ್ಷತೆಯನ್ನು ರಾಜ್ಯಸಭೆಯ ಡೆಪ್ಯುಟಿ ಸ್ಪೀಕರ್ ಕೆ. ರೆಹಮಾನ್ ಖಾನ್ ಅವರು ವಹಿಸಿದ್ದರು. ರೋನೆನ್ ಸೇನ್ ಅವರನ್ನು ಕರೆಸುವ ನಿರ್ಧಾರ ಅವಿರೋಧವಾಗಿತ್ತು ಎಂದು ತಿಳಿಸಿದ್ದಾರೆ. ಸಭೆಯಲ್ಲಿ ರವಿಶಂಕರ್ ಪ್ರಸಾದ್, ಎಸ್ ಎಸ್ ಅಹ್ಲುವಾಲಿಯಾ. ಶಾಂತಾರಾಮ್ ನಾಯಿಕ್ ಮತ್ತು ಆರ್ ಕೆ ಧವನ್ ಉಪಸ್ಥಿತರಿದ್ದರು.
ಲೋಕಸಭೆಯ ಹಕ್ಕು ಬಾಧ್ಯತಾ ಸಮಿತಿಯು ರೋನೆನ್ ಸೇನ್ ಬುಲಾವಿಗೆ ಸಂಬಂಧಪಟ್ಟಂತೆ ಈಗಾಗಲೇ ತೀರ್ಮಾನ ತೆಗೆದುಕೊಂಡಿದೆ. ರಾಜ್ಯ ಸಭೆಯ ಮುಂದಿನ ಹಕ್ಕು ಬಾದ್ಯತಾ ಸಮಿತಿಯ ಸಭೆ ಅಕ್ಟೋಬರ್ 29 ರಂದು ಸೇರಲಿದ್ದು ಲೋಕಸಭೆಯ ಸಮಿತಿ ಮರುದಿನ ಸೇರಲಿದೆ.
ಮೂಲಗಳ ಪ್ರಕಾರ ಸಮಿತಿಯ ಎದುರು ರೋನೆನ್ ಸೇನ್ ಹಾಜರಾಗುವ ದಿನಾಂಕವನ್ನು ನಿಗಧಿಪಡಿಸಿಲ್ಲ. ದಿನಾಂಕ ನಿಗದಿಯನ್ನು ಎರಡು ಸಮಿತಿಗಳು ಒಟ್ಟಾಗಿ ನಿರ್ಧರಿಸಲಿವೆ.
ರೋನೆನ್ ಸೇನ್ ಅವರ ಕ್ಷಮಾಪಣೆ ಪತ್ರವನ್ನು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಲೋಕಸಭೆ ಸ್ಪೀಕರ್ ಸೋಮನಾಥ್ ಚಟರ್ಜಿ ಅವರಿಗೆ ತಲುಪಿಸಿದ್ದು, ಸೋಮನಾಥ್ ಚಟರ್ಜಿ ಅವರು ಆ ಪತ್ರವನ್ನು ಹಕ್ಕು ಬಾಧ್ಯತಾ ಸಮಿತಿಗೆ ಕೆಲವು ದಿನಗಳ ಹಿಂದೆ ನೀಡಿ ತೀರ್ಮಾನ ತೆಗೆದುಕೊಳ್ಳಲು ಹೇಳಿದ್ದರು ಎಂದು ವರದಿಯಾಗಿದೆ.
|