ಮಹಿಳೆಯರಿಂದ ರಚಿಸಲ್ಪಟ್ಟ ದೇಶದ ಮೊದಲ ರಾಜಕೀಯ ಪಕ್ಷ ಯುನೈಟೆಡ್ ವುಮನ್ ಫ್ರಾಂಟ್(ಯುಡಬ್ಲ್ಯೂಎಫ್) ದೆಹಲಿಯಲ್ಲಿ ಮಂಗಳವಾರ ಪ್ರಾರಂಭಗೊಂಡಿತು.
ಮಹಿಳೆಯರಿಂದ ರಚಿಸಲ್ಪಟ್ಟರೂ ಈ ಪಕ್ಷವು ಭಾರತದ ಎಲ್ಲಾ ಪ್ರಜೆಗಳಿಗಾಗಿದೆ ಎಂದು ಯುಡಬ್ಲ್ಯೂಎಫ್ ಪಕ್ಷದ ಅಧ್ಯಕ್ಷೆ ಮತ್ತು ಮಾಜಿ ಉಪರಾಷ್ಟ್ರಪತಿ ಕೃಷ್ಣಕಾಂತ್ ಅವರ ಪತ್ನಿ ಸುಮನ್ ಕೃಷ್ಣಕಾಂತ್ ತಿಳಿಸಿದ್ದು, ಕಳೆದ ತಿಂಗಳು ಈ ಪಕ್ಷವು ಚುನಾವಣಾ ಆಯೋಗದಲ್ಲಿ ನೋಂದಾಯಿತಗೊಂಡಿದೆ ಎಂದು ಅವರು ಹೇಳಿದರು
ದೇಶದಲ್ಲಿ ಮಹಿಳೆಯರ ವಿರುದ್ಧ ಅಸುರಕ್ಷತೆ ಮತ್ತು ತಾರತಮ್ಯ ಧೋರಣೆ ತಾಳಲಾಗುತ್ತಿದೆ. ಭಾರತದ ರಾಷ್ಟ್ರೀಯ ಕಾರ್ಯಸೂಚಿಯಲ್ಲಿ ದೇಶದ ಅರ್ಧದಷ್ಟು ಜನಸಂಖ್ಯೆಯ ಅಗ್ರಸ್ಥಾನವನ್ನು ಮಹಿಳೆಯರು ಪಡೆಯುವಂತೆ ಪಕ್ಷವು ಕಾಳಜಿವಹಿಸುತ್ತದೆ ಎಂಬ ಭರವಸೆಯನ್ನು ಅವರು ನೀಡಿದರು.
ವಿಶ್ವದ ಎರಡನೇ ಅತಿ ಹೆಚ್ಚು ಜನಸಂಖ್ಯೆಯನ್ನು ಭಾರತವು ಹೊಂದಿದ್ದರೂ, ಸಂಸತ್ತಿನಲ್ಲಿ ಮಹಿಳಾ ಪ್ರಾತಿನಿಧ್ಯವು ಶೇಕಡಾ 8.8 ಕ್ಕಿಂತಲೂ ಕಡಿಮೆಯಿರುವುದು ಅತ್ಯಂತ ವಿಷಾದಕರವಾಗಿದೆ ಎಂದು ಅವರು ಹೇಳಿದರು.
ಪಕ್ಷದ ಕಾರ್ಯಸೂಚಿ ಮತ್ತು ನಿಯಮಗಳ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಲು ಯುಡಬ್ಲ್ಯೂಎಫ್ ಸದ್ಯದಲ್ಲಿಯೇ ಕಾರ್ಯನಿರ್ವಾಹಕ ಮಂಡಳಿ ಸಭೆಯನ್ನು ನಡೆಸಲಿದೆ ಎಂದು ಸುಮನ್ ಹೇಳಿದರು. ದೆಹಲಿ, ಬಿಹಾರ್, ಜಾರ್ಖಂಡ್ ಮತ್ತು ಹರಿಯಾಣ ಸೇರಿದಂತೆ 12 ರಾಜ್ಯಗಳಲ್ಲಿ ಸ್ಥಳೀಯ ಕಛೇರಿಗಳನ್ನು ಈಗಾಗಲೇ ತೆರೆಯಲಾಗಿದೆ ಎಂದು ಅವರು ಹೇಳಿದರು.
|