ಮನಮೋಹನ ಸಿಂಗ್ ಆಡಳಿತ ನಡೆಸುವ ನೈತಿಕ ಹಕ್ಕು ಕಳೆದುಕೊಂಡಿದ್ದು, ಪರಮಾಣು ಒಪ್ಪಂದದ ವೈಫಲ್ಯದಿಂದ ಅವರು ರಾಜೀನಾಮೆ ನೀಡಬೇಕೆಂಬ ಬಿಜೆಪಿ ವಾಗ್ದಾಳಿಗೆ ಉತ್ತರಿಸಿರುವ ಪ್ರಧಾನಿ, ಆಡಳಿತ ನಡೆಸುವ ನೈತಿಕ ಹಕ್ಕಿನ ಬಗ್ಗೆ ಮಾತನಾಡುವ ಅರ್ಹತೆ ಬಿಜೆಪಿಗೆ ಎಲ್ಲ ಪಕ್ಷಗಳಿಗಿಂತ ಕನಿಷ್ಠವಾಗಿದೆ ಎಂದು ಹೇಳಿದ್ದಾರೆ.
ಅವರು 2002ನೇ ಗುಜರಾತ್ ಗಲಭೆ ಬಗ್ಗೆ ಪ್ರಸ್ತಾಪಿಸಿ ಆಗ ಸಂಭವಿಸಿದ ಕಗ್ಗೊಲೆಗಳತ್ತ ಗಮನಸೆಳೆದರು. ಆಡ್ವಾಣಿ ಗೃಹಸಚಿವರಾಗಿದ್ದಾಗ ಆ ಘಟನೆ ನಡೆದಿದ್ದು ಗುಜರಾತ್ ಸರ್ಕಾರಕ್ಕೆ ಅವರು ಪ್ರಮಾಣಪತ್ರಗಳನ್ನು ನೀಡಿದರು ಎಂದು ಸಿಂಗ್ ವ್ಯಂಗ್ಯವಾಗಿ ಹೇಳಿದರು.
ಭಾರತ-ಪಾಕ್ ಆಗ್ರಾ ಶೃಂಗಸಭೆಯ ಬಗ್ಗೆ ಕೂಡ ಪ್ರಧಾನಿ ಮಾತನಾಡಿದರು.ಆಗ್ರಾ ಶೃಂಗಸಭೆಗೆ ಸಂಬಂಧಿಸಿದ ಗೊಂದಲದ ಬಗ್ಗೆ ಏನು ಹೇಳುತ್ತೀರಿ ಎಂದು ಪ್ರಶ್ನಿಸಿದರು.ಎನ್‌ಡಿಎ ಅಧಿಕಾರಾವಧಿಯ ಕಾರ್ಗಿಲ್ ಸಂಘರ್ಷದ ಬಗ್ಗೆ ಕೂಡ ಬಿಜೆಪಿಯನ್ನು ಅವರು ತರಾಟೆಗೆ ತೆಗೆದುಕೊಂಡರು.
ಆಫ್ರಿಕಾಗೆ ಐದು ದಿನಗಳ ಭೇಟಿ ಬಳಿಕ ಪ್ರಧಾನಮಂತ್ರಿ ಮನಮೋಹನ ಸಿಂಗ್ ಗುರುವಾರ ರಾತ್ರಿ ಸ್ವದೇಶಕ್ಕೆ ಹಿಂತಿರುಗಿದ್ದಾರೆ. 1962ರಲ್ಲಿ ಜವಾಹರಲಾಲ್ ನೆಹರು ತೈಲಸಮೃದ್ಧ ನೈಜೀರಿಯಕ್ಕೆ ಭೇಟಿ ನೀಡಿದ ಬಳಿಕ ಅಲ್ಲಿಗೆ ದ್ವಿಪಕ್ಷೀಯ ಬೇಟಿ ನೀಡುತ್ತಿರುವ ಮೊದಲ ಪ್ರಧಾನಮಂತ್ರಿ ಮನಮೋಹನ ಸಿಂಗ್. ಬಳಿಕ ಐಬಿಎಸ್ಎ ಶೃಂಗಸಭೆಯಲ್ಲಿ ಭಾಗವಹಿಸಲು ಅವರು ಪ್ರಿಟೋರಿಯದಲ್ಲಿ ಎರಡು ದಿನ ತಂಗಿದ್ದರು.
ಕಾರ್ಗಿಲ್ ಯುದ್ಧ ಏಕೆ ನಡೆಯಿತೆಂಬುದು ನಮಗೆಲ್ಲ ಗೊತ್ತು. ಅತಿಕ್ರಮಣಕಾರರು ನಮ್ಮ ಗಡಿಯೊಳಗೆ ನುಸುಳುತ್ತಿದ್ದಾಗ ಸರ್ಕಾರ ನಿದ್ರೆ ಮಾಡುತ್ತಿತ್ತು ಎಂದು ಹೇಳಿ, ನೈತಿಕ ಹಕ್ಕಿನ ಬಗ್ಗೆ ಬಿಜೆಪಿ ಮಾತನಾಡಲು ಕನಿಷ್ಠ ಅರ್ಹತೆ ಪಡೆದಿದೆ ಎಂದು ನುಡಿದರು.
|