ಸೇತುಸಮುದ್ರಂ ವಿಷಯವನ್ನು ಪರಿಶೀಲಿಸುವ ಸಮಿತಿಯಲ್ಲಿ ಹಿಂದು ಸಮುದಾಯದ ನಿಜವಾದ ಪ್ರತಿನಿಧಿಗಳನ್ನು ಸೇರಿಸದಿದ್ದರೆ ರಾಷ್ಟ್ರವ್ಯಾಪಿ ಚಳವಳಿ ಹಮ್ಮಿಕೊಳ್ಳುವುದಾಗಿ ವಿಶ್ವ ಹಿಂದು ಪರಿಷದ್ ಶನಿವಾರ ತಿಳಿಸಿದೆ.
ಹಿಂದು ಸಂಪ್ರದಾಯಗಳ ಬಗ್ಗೆ ಅತ್ಯಲ್ಪ ಗೌರವ ಹೊಂದಿರುವ ಮಾರ್ಕ್ಸಿಸ್ಟ್ ಬುದ್ಧಿಜೀವಿಗಳನ್ನು ಸಮಿತಿ ಹೊಂದಿದೆ ಎಂದು ವಿಎಚ್‌ಪಿ ನಾಯಕ ಪ್ರವೀಣ್ ತೊಗಾಡಿಯಾ ವರದಿಗಾರರಿಗೆ ಇಲ್ಲಿ ತಿಳಿಸಿದರು. ಸರ್ಕಾರ ಹಿಂದು ಸಮಾಜದ ನೈಜ ಪ್ರತಿನಿಧಿಗಳನ್ನು ಸಮಿತಿಗೆ ಸೇರಿಸದಿದ್ದರೆ ಕೇಸರಿ ಸಂಘಟನೆಯು ರಾಷ್ಟ್ರವ್ಯಾಪಿ ಪ್ರತಿಭಟನೆ ಹಮ್ಮಿಕೊಳ್ಳಲಿದೆ ಎಂದು ತೊಗಾಡಿಯ ಎಚ್ಚರಿಸಿದರು.
ಯೋಜನೆಯ ಹೆಸರಿನಲ್ಲಿ ರಾಮ ಸೇತು ನಾಶವಾಗುವುದಿಲ್ಲ ಎಂದು ಸರ್ಕಾರ ಆಶ್ವಾಸನೆ ನೀಡಬೇಕು ಎಂದು ವಿಎಚ್‌ಪಿ ಅಂತಾರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಒತ್ತಾಯಿಸಿದರು.ವಿಎಚ್‌ಪಿ ಪದಾಧಿಕಾರಿಗಳ ಸಭೆಯಲ್ಲಿ ಭಾಗವಹಿಸಿದ್ದ ಅವರು ಕೇಂದ್ರ ಸರ್ಕಾರ ಈ ದಿಸೆಯಲ್ಲಿ ಕ್ರಮ ಕೈಗೊಳ್ಳಲು ವಿಫಲವಾದರೆ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುವುದು ಎಂದು ಎಚ್ಚರಿಸಿದರು.
ಅಯೋಧ್ಯೆಯಲ್ಲಿ ನವೆಂಬರ್ ಮೊದಲ ವಾರದಲ್ಲಿ ಸಂತರು ಮತ್ತು ಧಾರ್ಮಿಕ ನಾಯಕರ ಸಮಾವೇಶವನ್ನು ನಾವು ಯೋಜಿಸಿದ್ದೇವೆ. ಲಕ್ಷಾಂತರ ಹಿಂದುಗಳ ಕಳವಳಕ್ಕೆ ಪ್ರತಿಕ್ರಿಯಿಸಲು ಸರ್ಕಾರ ವಿಫಲವಾದರೆ ಆ ಸಂದರ್ಭವನ್ನು ಕೆಲವು ಕಠಿಣ ಕ್ರಮ ಕೈಗೊಳ್ಳಲು ಬಳಸಿಕೊಳ್ಳಲಾಗುವುದು ಎಂದು ಅವರು ನುಡಿದರು.
|