ಬಾಲಿವುಡ್ ನಟ ಸಂಜಯ್ ದತ್ ಅವರಿಗೆ ಆತಿಥ್ಯ ನೀಡಲು ಪುಣೆಯ ಯರವಾಡ ಜೈಲು ಪುನಃ ಕಾಯುತ್ತಿದೆ. ಟಾಡಾ ಕೋರ್ಟ್ ತೀರ್ಪಿನ ಪ್ರತಿಯನ್ನು ಕೋರ್ಟ್ ದತ್‌ಗೆ ಹಸ್ತಾಂತರಿಸಿದ ಕೂಡಲೇ ಅವರನ್ನು ಪುಣೆಯ ಯರವಾಡ ಜೈಲಿಗೆ ಕಳಿಸಲಾಗುವುದು. ಟಾಡಾ ಕೋರ್ಟ್ ಶುಕ್ರವಾರ ಸಂಜಯ್ ದತ್ ಅವರಿಗೆ ಮುಂಬೈ ಬಾಂಬ್ ಸ್ಫೋಟದ ತೀರ್ಪಿನ ಪ್ರತಿಗಳನ್ನು ನೀಡಲು ವಿಫಲವಾಗಿತ್ತು.
ವಾರಾಂತ್ಯದಲ್ಲಿ 100 ಮಂದಿ ತಪ್ಪಿತಸ್ಥರಲ್ಲಿ 13 ಮಂದಿಗೆ ಮಾತ್ರ ತೀರ್ಪಿನ ಪ್ರತಿಗಳನ್ನು ನೀಡಲು ಕೋರ್ಟ್‌ಗೆ ಸಾಧ್ಯವಾಗಿದೆ. ದತ್ ಜತೆಯಲ್ಲಿ ಅವನ ಸಹಚರರಾದ ಕೆರ್ಸಿ ಅಡ್ಜಾನಿಯ, ಯೂಸುಫ್ ನಲ್ವಾವಾ ಮತ್ತು ರುಸಿ ಮುಲ್ಲಾ ಕೂಡ ತೀರ್ಪಿನ ಪ್ರತಿಗಳನ್ನು ಸೋಮವಾರ ಪಡೆಯಲಿದ್ದಾರೆ.
ದತ್‌ಗೆ ತೀರ್ಪಿನ ಪ್ರತಿ ಶನಿವಾರವೇ ಸಿಕ್ಕಿದ್ದರೆ, ಮಹಾರಾಷ್ಟ್ರ ಪೊಲೀಸರು ಅವರನ್ನು ಯೆರವಾಡ ಜೈಲಿಗೆ ಪುನಃ ವರ್ಗಾಯಿಸುತ್ತಿದ್ದರು. ದತ್‌ಗೆ ಜಾಮೀನು ಸಿಗುವ ಮುನ್ನ 22 ದಿನಗಳನ್ನು ಅವರು ಯರವಾಡ ಜೈಲಿನಲ್ಲೇ ಕಳೆದಿದ್ದರು.
ದತ್ ಪುನಃ ಜೈಲು ಸೇರಿದರೆ ಕಾಯಂ ಜಾಮೀನಿಗಾಗಿ ದತ್ ವಕೀಲರು ಸುಪ್ರೀಂಕೋರ್ಟ್ ಮೊರೆ ಹೋಗುವರೆಂದು ನಿರೀಕ್ಷಿಸಲಾಗಿದೆ ಮತ್ತು ಟಾಡಾ ಕೋರ್ಟ್ ನೀಡಿದ 6 ವರ್ಷಗಳ ಶಿಕ್ಷೆಯನ್ನು ಅವರು ಪ್ರಶ್ನಿಸಲಿದ್ದಾರೆ.
|