ಕವಿಯಿತ್ರಿ ಮಧುಮಿತಾ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರಪ್ರದೇಶದ ಮಾಜಿ ಸಚಿವ ಅಮರಮಣಿ ಹಾಗೂ ಅವರ ಪತ್ನಿ ಮಧುಮಣಿ ಸೇರಿದಂತೆ ನಾಲ್ವರಿಗೆ ಜೀವಾವಧಿ ಶಿಕ್ಷೆ ಮತ್ತು 50,ಸಾವಿರ ರೂ.ಗಳ ದಂಡ ವಿಧಿಸಿ ವಿಶೇಷ ನ್ಯಾಯಾಲಯ ಆದೇಶ ಹೊರಡಿಸಿದೆ.
ಮಾಜಿ ಸಚಿವ ಅಮರಮಣಿ ಅವರ ಸಹಚರರಾದ ಸಂತೋಷ ರೈ ಹಾಗೂ ರೋಹಿತ್ ಚತುರ್ವೇದಿ ಅವರು ಜೀವಾವಧಿ ಶಿಕ್ಷೆ ಪಡೆದ ಆರೋಪಿಗಳಾಗಿದ್ದಾರೆ. ಇನ್ನೊಬ್ಬ ಆರೋಪಿ ಪ್ರಕಾಶ ಪಾಂಡೆ ಅವರನ್ನುನ್ಯಾಯಾಲಯ ಆರೋಪದಿಂದ ಮುಕ್ತಗೊಳಿಸಲಾಗಿದ್ದು ಖುಲಾಸೆಗೊಳಿಸಲಾಗಿದೆ.
ಕಳೆದ ವರ್ಷ ಸುಪ್ರೀಂಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಲಕ್ನೋದ ಜಿಲ್ಲಾ ಸೆಷನ್ಸ್ ನ್ಯಾಯಾಧೀಶ ವಿ.ಬಿ.ರಾಯ್ ಅವರು ಮಧುಮಿತಾ ಕೊಲೆ ಪ್ರಕರಣವನ್ನು ಲಕ್ನೋದಿಂದ ಡೆಹರಾಡೂನ್‌ಗೆ ವರ್ಗಾಯಿಸಿದ್ದರು.
ಪ್ರಕರಣ ಕುರಿತಂತೆ 79 ಸಾಕ್ಷಿಗಳು ನ್ಯಾಯಾಲಯದಲ್ಲಿ ಹಾಜರಾಗಿದ್ದು,ಮಾಜಿ ಸಚಿವ ಅಮರಮಣಿ ವಿರುದ್ದ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿ ಆದೇಶ ಹೊರಡಿಸಲಾಗಿದೆ.
ಕಳೆದ ವರ್ಷ ಮಾರ್ಚ ತಿಂಗಳಿನಲ್ಲಿ ಪ್ರಕರಣದ ವಿಚಾರಣೆ ಆರಂಭವಾಗಿದ್ದು, ಆರೋಪಿ ಅಮರಮಣಿ ದಂಪತಿಗಳು ಪ್ರಭಾವಿ ವ್ಯಕ್ತಿಗಳಾಗಿದ್ದರಿಂದ ಮುಕ್ತ ಹಾಗೂ ಪಾರದರ್ಶಕ ನ್ಯಾಯ ದೊರೆಯಲು ಸಾಧ್ಯವಿಲ್ಲ ಎಂದು ಕೊಲೆಯಾದ ಮಧುಮಿತಾ ಕುಟುಂಬದ ಸದಸ್ಯರು ಸುಪ್ರೀಂಕೋರ್ಟ್‌ಗೆ ಮನವಿ ಸಲ್ಲಿಸಿದ್ದರು.ಮನವಿಯನ್ನು ಕೈಗೆತ್ತಿಕೊಂಡ ನ್ಯಾಯಾಲಯ ಪ್ರಕರಣವನ್ನು ಲಕ್ನೋದಿಂದ ಡೆಹರಾಡೂನ್‌ಗೆ ವರ್ಗಾಯಿಸಿತ್ತು.
ಲಕ್ನೋದ ಫ್ಲ್ಯಾಟೊಂದರಲ್ಲಿ 2003 ಮೇ 9 ರಂದು ಮಾಜಿ ಸಚಿವ ಅಮರಮಣಿ ಪತ್ನಿ ಮಧುಮಣಿ ತನ್ನ ಪತಿಯೊಂದಿಗೆ ಮಧುಮಿತಾ ಹೊಂದಿರುವ ಅನೈತಿಕ ಸಂಬಂಧವನ್ನು ವಿರೋಧಿಸಿ ಅವರನ್ನು ಹತ್ಯೆಗೈದಿದ್ದರು ಎಂದು ಆರೋಪಿಸಲಾಗಿತ್ತು.
ಈ ಪ್ರಕರಣದಲ್ಲಿ ಮಧುಮಿತಾ ಸಹೋದರಿ ನಿಧಿ ಹಾಗೂ ಸೇವಕ ದೇಸರಾಜ್ ಪ್ರಕರಣದ ಪ್ರಮುಖ ಸಾಕ್ಷಿಗಳಾಗಿದ್ದರು. ತನ್ನ ಸಹೋದರಿ ಮಧುಮಿತಾಳ ಹತ್ಯೆಗೆ ಕಾರಣವಾದ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸುವಂತೆ ನಿಧಿ ನ್ಯಾಯಾಲಯವನ್ನು ಕೋರಿದ್ದಳು.
|