1998ರ ಬಾಂಬ್ ಸ್ಫೋಟದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮುಖ್ಯ ಆರೋಪಿ ಮತ್ತು ಅಲ್ ಉಮ್ಮಾ ಸಂಘಟನೆಯ ಸಂಸ್ಥಾಪಕ-ನಾಯಕ ಎಸ್. ಎ.ಭಾಷಾಗೆ ಕೊಯಮತ್ತೂರು ವಿಶೇಷ ಕೋರ್ಟ್ ಜೀವಾವಧಿ ಶಿಕ್ಷೆಯನ್ನು ವಿಧಿಸಿದೆ.
ಸಂಘಟನೆಯ ಪ್ರಧಾನಕಾರ್ಯದರ್ಶಿ ಮೊಹಮದ್ ಅನ್ಸಾರಿಗೆ ಎರಡು ಬಾರಿಗೆ ಜೀವಾವಧಿ ಶಿಕ್ಷೆಯನ್ನು ಕೋರ್ಟ್ ವಿಧಿಸಿದೆ. ಇನ್ನುಳಿದ 8 ಮಂದಿ ಮುಖ್ಯ ಆರೋಪಿಗಳಿಗೆ ಕೂಡ ವಿಶೇಷ ಕೋರ್ಟ್ ನ್ಯಾಯಾಧೀಶ ಕೆ. ಉಥಿರಾಪತಿ ಜೀವಾವಧಿ ಶಿಕ್ಷೆ ವಿಧಿಸಿದ್ದಾರೆ.
ಬಿಜೆಪಿ ನಾಯಕ ಎಲ್.ಕೆ.ಆಡ್ವಾಣಿ ಅವರು 1998ರ ಫೆ.14ರಂದು ಕೊಯಮತ್ತೂರಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಸಂಭವಿಸಿದ ಬಾಂಬ್ ಸ್ಪೋಟದಲ್ಲಿ 58 ಮಂದಿ ಬಲಿಯಾಗಿದ್ದರು. ಸ್ಫೋಟಕ್ಕೆ ಸಂಬಂಧಪಟ್ಟಂತೆ ಬಂಧಿತರಾದ 166 ಮಂದಿಯಲ್ಲಿ 158 ಜನರು ತಪ್ಪಿತಸ್ಥರೆಂದು ಕೋರ್ಟ್ ತೀರ್ಪು ನೀಡಿತ್ತು.
ಕೇರಳ ಮೂಲದ ಪಿಡಿಪಿ ನಾಯಕ ಅಬ್ದುಲ್ ನಾಸೆರ್ ಮಧಾನಿ ಸೇರಿದಂತೆ ಇನ್ನೂ 8 ಮಂದಿ ವಿರುದ್ಧ ಆರೋಪಗಳು ಸಾಬೀತಾಗದ ಹಿನ್ನೆಲೆಯಲ್ಲಿ ಅವರನ್ನು ಖುಲಾಸೆಗೊಳಿಸಲಾಗಿತ್ತು.158 ಮಂದಿಯಲ್ಲಿ 88 ಮಂದಿಗೆ ಹತ್ಯೆ ಪ್ರಯತ್ನ ಮತ್ತು ಸ್ಫೋಟಕಗಳನ್ನು ಹೊಂದಿದ್ದ ಸಣ್ಣಪುಟ್ಟ ಆರೋಪಗಳ ಮೇಲೆ 21 ತಿಂಗಳುಗಳಿಂದ 9 ವರ್ಷಗಳವರೆಗೆ ಶಿಕ್ಷೆಯನ್ನು ಕೋರ್ಟ್ ವಿಧಿಸಿತು.
ಅವರುಗಳು ವಿಚಾರಣಾಧೀನ ಕೈದಿಗಳಾಗಿ ಈಗಾಗಲೇ ಶಿಕ್ಷೆಯ ಅವಧಿ ಪೂರೈಸಿರುವುದರಿಂದ ನ್ಯಾಯಾಧೀಶರು ಅವರ ಬಿಡುಗಡೆಗೆ ಆದೇಶ ನೀಡಿದರು.ಕೋಯಮತ್ತೂರು ಬಾಂಬ್ ಸ್ಫೋಟದ ತೀರ್ಪು ಪ್ರಕಟಿಸಿದ ಹಿನ್ನೆಲೆಯಲ್ಲಿ ಕೋರ್ಟ್ ಸುತ್ತಲೂ ಸಾರ್ವಜನಿಕರು ಮತ್ತು ವಾಹನಗಳ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿತ್ತು, ಸೂಕ್ಷ್ಮ ಪ್ರದೇಶಗಳಲ್ಲಿ ಶಸ್ತ್ರಸಜ್ಜಿತ ಕಾವಲುಗಾರರನ್ನು ನಿಯೋಜಿಸಲಾಗಿತ್ತು.
|