10 ವರ್ಷಗಳ ಹಿಂದೆ ಕನ್ನಾಟ್‌ಪ್ಲೇಸ್‌ನಲ್ಲಿ ನಡೆದ ನಕಲಿ ಎನ್‌ಕೌಂಟರ್‌ನಲ್ಲಿ ಇಬ್ಬರು ಅಮಾಯಕ ಉದ್ಯಮಿಗಳನ್ನು ಹತ್ಯೆ ಮಾಡಿದ ಸಹಾಯಕ ಪೊಲೀಸ್ ಆಯುಕ್ತ ಎಸ್.ಎಸ್. ರಥಿ ಮತ್ತು ಇಬ್ಬರು ಪೊಲೀಸರಿಗೆ ಮರಣದಂಡನೆ ಶಿಕ್ಷೆ ನೀಡುವಂತೆ ಸಿಬಿಐ ಬುಧವಾರ ಕೋರಿದೆ.
ಸಿಬಿಐ ಪರವಾಗಿ ವಾದಿಸಿದ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಎಸ್.ಕೆ. ಸಕ್ಸೇನಾ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ವಿನೋದ್ ಕುಮಾರ್ ಎದುರು ಹೇಳಿಕೆ ನೀಡುತ್ತಾ, ಗುಂಡು ಹಾರಿಸಿ ಕೊಂದ ಮುಖ್ಯ ಪೇದೆ ಮಹಾವೀರ್ ಸಿಂಗ್ ಮತ್ತು ಪೇದೆ ಕೊಥಾರಿ ರಾಮ್ ಮತ್ತು ನೇತೃತ್ವ ವಹಿಸಿದ ರಥಿ ಅವರ ಅಪರಾಧ ಅಪರೂಪದಲ್ಲಿ ಅಪರೂಪವಾಗಿದ್ದು, ಮರಣ ದಂಡನೆ ಶಿಕ್ಷೆಗೆ ಸೂಕ್ತವಾಗಿದೆ ಎಂದು ಅವರು ನುಡಿದರು. ಸಕ್ಸೇನಾ ಇನ್ನುಳಿದ ಏಳು ತಪ್ಪಿತಸ್ಥ ಪೊಲೀಸರಿಗೆ ಗಲ್ಲುಶಿಕ್ಷೆ ನೀಡುವಂತೆ ಆಗ್ರಹಿಸಲಿಲ್ಲ.
ಎಲ್ಲ ತಪ್ಪಿತಸ್ಥರು ಪೊಲೀಸ್ ಪಡೆಗೆ ಸೇರಿದವರು. ಕಾನೂನು ರಕ್ಷಕರಾಗಬೇಕಾದವರು ಅಸಹಾಯಕ ವ್ಯಕ್ತಿಗಳ ಕಾರಿನತ್ತ 34 ಸುತ್ತು ಗುಂಡುಹಾರಿಸಿದ್ದು ಅವರ ಅಪರಾಧದ ತೀವ್ರ ದುಷ್ಟತನಕ್ಕೆ ಸಾಕ್ಷಿಯಾಗಿದೆ ಎಂದು ಪ್ರಾಸಿಕ್ಯೂಟರ್ ಹೇಳಿದ್ದಾರೆ.
|