ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
 
ರಂಗಭೂಮಿ ಸಂಪನ್ಮೂಲ ವಿಕೇಂದ್ರಿಕರಣವಾಗಲಿ: ಕವತ್ತಾರ್
ದೇಶದ ಸಾಂಸ್ಕ್ಕತಿಕ ರಂಗದ ಎಲ್ಲ ಸಂಪನ್ಮೂಲಗಳೂ ದೆಹಲಿಯಂಥ ಒಂದೇ ನಗರದಲ್ಲಿ ಗಿರಕಿ ಹೊಡೆಯುತ್ತಿವೆ. ಅವುಗಳು ಇತರ ರಾಜ್ಯ ಹಾಗೂ ನಗರಗಳಿಗೂ ಹರಿದರೆ, ದೇಶದ ಸಾಂಸ್ಕ್ಕತಿಕ ಕ್ಷೇತ್ರವು ಎಲ್ಲ ದಿಸೆಗಳಲ್ಲಿ ಬೆಳೆಯಲು ಸಾಧ್ಯವಾಗುತ್ತದೆ ಎಂದು ಕರ್ನಾಟಕದ ಖ್ಯಾತ ರಂಗಕರ್ಮಿ ಕೃಷ್ಣಮೂರ್ತಿ ಕವತ್ತಾರ್ ಹೇಳಿದರು.

ದೆಹಲಿ ಕರ್ನಾಟಕ ಸಂಘವು ಕರ್ನಾಟಕ ನಾಟಕ ಅಕಾಡೆಮಿ ಸಹಯೋಗದಲ್ಲಿ ಇಲ್ಲಿ ನಡೆಸುತ್ತಿರುವ ರಂಗ ತರಬೇತಿ ಶಿಬಿರದ ಹಿನ್ನೆಲೆಯಲ್ಲಿ ಅವರು ಅನೌಪಚಾರಿಕವಾಗಿ ಮಾತನಾಡುತ್ತಿದ್ದರು. (ಅವರು ತರಬೇತಿ ಶಿಬಿರದ ನಿರ್ದೇಶಕರಾಗಿದ್ದಾರೆ).

ಭಾರತೀಯ ರಂಗಭೂಮಿಯು ಕೇವಲ ದೆಹಲಿಗೆ ಮಾತ್ರ ಸೀಮಿತವಲ್ಲ. ಹಲವಾರು ವರ್ಷಗಳಿಂದ ಅವ್ಯಾಹತವಾಗಿ ಆರ್ಥಿಕ ಮಲತಾಯಿ ಧೋರಣೆಯನ್ನು ದೆಹಲಿ ತಾಳುತ್ತ ಬಂದಿದೆ. ಎಲ್ಲವೂ ದೆಹಲಿಯಿಂದಲೇ ಆರಂಭವಾಗಬೇಕು ಎಂಬ ಹಠ ಅನೂಚಾನವಾಗಿ ನಡೆದುಕೊಂಡು ಬಂದಿದೆ. ಇಂಥದ್ದೊಂದು ವಾತಾವರಣವು ಸಾಂಸ್ಕ್ಕತಿಕವಾಗಿ ಕ್ಷೇಮಕರವಲ್ಲ. ನಾವೇ ಮಾಡಿಕೊಂಡಿರುವ ಪ್ರಜಾಪ್ರಭುತ್ವವೆಂಬ ಈ ವ್ಯವಸ್ಥೆಯ ಸಾಂಸ್ಕ್ಕತಿಕ ವಿಭಾಗವೂ ಕೂಡ ಈ ರೀತಿ ಪಾರ್ಶ್ವವಾಯು ಪೀಡಿತವಾದರೆ ಸಾಂಸ್ಕ್ಕತಿಕ ಪುನಶ್ಚೇತನ ಹೇಗೆ ಸಾಧ್ಯ ? ಇಡೀ ವ್ಯವಸ್ಥೆಯು ಪ್ರತಿ ಹಳ್ಳಿಯ ಪ್ರತಿಭಾವಂತನನ್ನೂ ತಲುಪುವಂತೆ ಆಗಬೇಕು. ಆಗ ಮಾತ್ರ ದೇಶವು ಸಾಂಸ್ಕ್ಕತಿಕವಾಗಿ ಶ್ರೀಮಂತ ಎನಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದರು.

ದೇಶದ ರಾಜಧಾನಿಯಾಗಿರುವ ನವದೆಹಲಿಯಲ್ಲಿ ರಾಷ್ಟ್ರೀಯ ನಾಟಕ ಶಾಲೆ ಇದೆ. ರಾಜಧಾನಿಯಲ್ಲಿ ಲೆಕ್ಕವಿಲ್ಲದಷ್ಟು ಅಕಾಡೆಮಿಗಳು, ಸಂಸ್ಥೆಗಳು ಇವೆ. ಇವುಗಳನ್ನೆಲ್ಲ ಕೇಂದ್ರ ಸರ್ಕಾರ ಜತನದಿಂದ ಸಾಕುತ್ತಿದೆ. ಲಭ್ಯವಿರುವ ಎಲ್ಲ ಆರ್ಥಿಕ ಸಂಪನ್ಮೂಲಗಳು ಇಲ್ಲಿಲ್ಲೇ ಹರಿದು ಹಂಚಿ ಹೋಗುತ್ತಿವೆ. ಅವುಗಳು ದೂರದ ಕರ್ನಾಟಕದಂಥ ರಾಜ್ಯದವರೆಗೂ ಸಾಕಷ್ಟು ಪ್ರಮಾಣದಲ್ಲಿ ಹರಿದು ಬರುತ್ತಿಲ್ಲ. ಹೀಗಾಗಿ, ಅನೇಕ ಪ್ರತಿಭಾವಂತರು ಅವಕಾಶ ವಂಚಿತರಾಗುತ್ತಿದ್ದಾರೆ ಮತ್ತು ಸಾಕಷ್ಟು ಆರ್ಥಿಕ ಸಂಪನ್ಮೂಲಗಳಿಲ್ಲದೇ ಕರ್ನಾಟಕದ ರಂಗಭೂಮಿ ಮತ್ತು ಸಾಂಸ್ಕ್ಕತಿಕ ಜಗತ್ತು ನಷ್ಟ ಅನುಭವಿಸುತ್ತಿದೆ ಎಂದು ಅವರು ವಿಷಾದಿಸಿದರು.

ಸಾಂಸ್ಕ್ಕತಿಕ ಜಾಗತೀಕರಣ: ವ್ಯಾಪಾರೀಕರಣಗೊಂಡ ಇಂದಿನ ದಿನಗಳಲ್ಲಿ ನಮ್ಮತನ ನಶಿಸಿ ಹೋಗುತ್ತಿದೆ. ಎಲ್ಲೆಡೆ ವ್ಯಾಪಾರಿ ಮೂಲದಿಂದ ಬರುವ ಅಥವಾ ಅಮೆರಿಕ ಎಂಬ ದೊಡ್ಡಣ್ಣನ ಮೂಸೆಯಿಂದ ಬರುವುದೆಲ್ಲವೂ ನಮಗರಿವಿಲ್ಲದೆ ನಮ್ಮನ್ನು ಮತ್ತು ಈ ದೇಶವನ್ನು ಮೋಸದ ಜಾಲಕ್ಕೆ ದೂಡಿದೆ- ದೂಡುತ್ತಲೂ ಇದೆ. ಎಲ್ಲವನ್ನೂ ಬಣ್ಣ ಬಣ್ಣದ ಪ್ಯಾಕೆಟ್‌ಗಳಲ್ಲಿ ತುಂಬಿ ಥರಾವರಿ ಜಾಹೀರಾತುಗಳ ಮೂಲಕ ಕಣ್ಣಿಗೆ ಮಣ್ಣೆರಚಿ ಮಾರಾಟ ಮಾಡುವತ್ತ ಕೇಂದ್ರೀಕರಣಗೊಂಡಿದೆ.

ಮನೋ ರಂಗಭೂಮಿ : ಈಗ ನಮ್ಮ ಬದುಕು ಹಲವಾರು ಕಾರಣಗಳಿಂದ ತುಂಬ ಸಂಕೀರ್ಣವಾಗಿದೆ. ದೇವರು, ಧರ್ಮ, ಸಂಪ್ರದಾಯಗಳು, ನಂಬಿಕೆಗಳು, ಮತ, ಪಂಥ ಮತ್ತು

ವ್ಯಾಪಾರೀಕರಣ- ಮುಂತಾದ ಕಾರಣಗಳಿಂದಾಗಿ ಈಗ ಎಲ್ಲಡೆ ಭಯದ ವಾತಾವರಣ ನಿರ್ಮಾಣವಾಗಿದೆ. ಮನುಷ್ಯ ಪ್ರತಿಕ್ಷಣವೂ ಆತಂಕ- ಭಯದ ನೆರಳಿನಲ್ಲೇ ಬದುಕುವಂತಾಗಿದೆ. ಅನಿಯಮಿತ ಈ ವೇಗದ ಬದುಕಿನಲ್ಲಿ ಒಂದು ಕ್ಷಣ ನಿಂತು ಯೋಚಿಸುವುದೇ ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ. ಇಂಥ ಸಂದರ್ಭದಲ್ಲಿ ಮನೋ ರಂಗಭೂಮಿ ನಮ್ಮನ್ನು ಬದುಕಿಸುವ ಶಕ್ತಿ ಹೊಂದಿದೆ ಎಂದು ಅವರು ಹೇಳಿದರು.

ಮನುಷ್ಯನನ್ನು ಆಂತರಿಕವಾಗಿ ಗಟ್ಟಿಗೊಳಿಸುವುದೇ ಮನೋ ರಂಗಭೂಮಿಯ ಮೂಲ ಮಂತ್ರ. ಆಂತರಿಕವಾಗಿ ಮನುಷ್ಯ ಗಟ್ಟಿಗೊಂಡರೆ ಬಾಹ್ಯವಾಗಿರುವ ಎಲ್ಲ ಸಂಬಂಧಗಳು ಶಕ್ತಿ ಪಡೆದುಕೊಳ್ಳುತ್ತವೆ. ಮನೋ ರಂಗಭೂಮಿಯ ಮೂಲಕ ನಾವು ನಮ್ಮ ಎಲ್ಲ ಅನುಭವಗಳನ್ನು ಹಂಚಿಕೊಳ್ಳುತ್ತೇವೆ. ಆ ಮೂಲಕ ಮನುಷ್ಯ -ಮನುಷ್ಯ ಆಪ್ತವಾಗುತ್ತಾನೆ. ಹಿಂಸೆ ದೂರವಾಗುತ್ತದೆ. ಮನಸ್ಸಿಗೆ ಸಾಂತ್ವನ ದೊರೆಯುತ್ತದೆ. ನಾವು ಸಹಜವಾಗಿ ಬದುಕುವ ಮನಸ್ಥಿತಿಯನ್ನೇ ಕಳೆದುಕೊಂಡಿರುವ ಇಂಥ ಸಂಧಿ ಕಾಲದಲ್ಲಿ ಮನೋ ರಂಗಭೂಮಿ ನಮ್ಮ ನೆರವಿಗೆ ನಿಲ್ಲಬಲ್ಲ ಸಾಮರ್ಥ್ಯವನ್ನು ಹೊಂದಿದೆ. ಬದುಕಿನ ಎಲ್ಲ ಆಯಾಮಗಳನ್ನು ಅನುಭವಿಸುತ್ತ ಬದುಕುವ ಒಂದು ಕಲೆಯನ್ನು ಈ ರಂಗಭೂಮಿ ನಮಗೆ ನೀಡುತ್ತದೆ. ಅದರ ರಸಾನುಭವ ಪಡೆಯುವ ಮನಸ್ಸನ್ನು ನಾವು ರೂಢಿಸಿಕೊಳ್ಳಬೇಕಾಗಿದೆ ಎಂದು ಅವರು ಅಭಿಪ್ರಾಯಪಟ್ಟರು
ಮತ್ತಷ್ಟು
ತಜ್ಞರ ಸಮಿತಿ ಪುನಾರಚನೆಗೆ ಕೋರ್ಟ್ ನಕಾರ
ರಥಿಗೆ ಮರಣದಂಡನೆಗೆ ಸಿಬಿಐ ಕೋರಿಕೆ
ಕೊಯಮತ್ತೂರು ಸ್ಫೋಟ: ಭಾಷಾಗೆ ಜೀವಾವಧಿ
ಮಾಜಿ ಸಚಿವ ಅಮರಮಣಿ ದಂಪತಿಗಳಿಗೆ ಜೀವಾವಧಿ ಶಿಕ್ಷೆ
ಅಮೀರ್‍‌ಖಾನ್‌ಗೆ ಜಾಮೀನುರಹಿತ ವಾರಂಟ್
ಅಸ್ಪಷ್ಟ ಜನಾದೇಶದಿಂದ ಸರ್ಕಾರಕ್ಕೆ ತೊಡಕು