ಹಿಂದು ಭಾವನೆಗಳಿಗೆ ಧಕ್ಕೆಯುಂಟುಮಾಡುವ ಪೆರಿಯಾರ್ ಇ.ವಿ. ರಾಮಸ್ವಾಮಿ ಅವರ "ಸಚ್ಚಿ ರಾಮಾಯಣ"ವನ್ನು ನಿಷೇಧಿಸುವಂತೆ ಪ್ರತಿಪಕ್ಷ ಬಿಜೆಪಿ ಗುರುವಾರ ಒತ್ತಾಯಿಸಿದೆ. "ಪುಸ್ತಕದ ಹಿಂದಿ ಅನುವಾದ ಸಚ್ಚಿ ರಾಮಾಯಣವನ್ನು ಆಡಳಿತರೂಢ ಬಹುಜನ ಸಮಾಜ ಪಕ್ಷದ ಪುಸ್ತಕದ ಅಂಗಡಿಗಳಲ್ಲಿ ಮಾರಾಟವಾಗುತ್ತಿದೆ.
ಪುಸ್ತಕದಲ್ಲಿ ರಾಮನ ವಿರುದ್ಧ ಅವಹೇಳನಕಾರಿ ಪದಗಳಿರುವುದು ನಮಗೆ ಗೊತ್ತಿರಲಿಲ್ಲ. ಇತ್ತೀಚಿನ ಹಿಂದಿ ಅನುವಾದದ ಪುಸ್ತಕ ನಮ್ಮ ಬಳಿ ಲಭ್ಯವಿದ್ದು, ನಮ್ಮ ಶಂಕೆಗೆ ಪುಷ್ಠಿ ಒದಗಿಸಿದೆ" ಎಂದು ಬಿಜೆಪಿ ಶಾಸಕಾಂಗ ಪಕ್ಷದ ನಾಯಕ ಓಂಪ್ರಕಾಶ್ ಸಿಂಗ್ ಹೇಳಿದರು.
"ಬಿಜೆಪಿ ಮುಂದಿನ ಚಳಿಗಾಲದ ಅಧಿವೇಶನದಲ್ಲಿ ಈ ವಿಷಯ ಪ್ರಸ್ತಾಪಿಸುವುದು. ಎಲ್ಲ ಶಾಸಕರಿಗೆ ಮತ್ತು ವಿವಿಧ ಪಕ್ಷಗಳ ನಾಯಕರಿಗೆ ನಾವು ಆಕ್ಷೇಪಾರ್ಹ ಭಾಗವನ್ನು ಕಳಿಸಿದ್ದೇವೆ" ಎಂದು ಹೇಳಿದರು. ಪುಸ್ತಕದ ಸಾರದ ಬಗ್ಗೆ ನಾವು ಮುಖ್ಯಮಂತ್ರಿ ಮತ್ತು ಬಿಎಸ್‌ಪಿ ಅಧ್ಯಕ್ಷೆ ಮಾಯಾವತಿ ಅವರಿಗೆ ಕೂಡ ಪತ್ರ ಬರೆದಿದ್ದೇವೆ. ಇದು ರಾಜಕೀಯ ವಿಷಯವಲ್ಲ. ಆದರೆ ನಂಬಿಕೆಯ ವಿಷಯ ಎಂದು ಅವರು ನುಡಿದರು.
ಬಿಎಸ್‌ಪಿ ವಿರುದ್ಧ ವಾಗ್ದಾಳಿ ಮಾಡಿದ ಅವರು, ಭಗವಾನ್ ರಾಮ ಮತ್ತು ಕೃಷ್ಣನ ಅಸ್ತಿತ್ವದ ಬಗ್ಗೆ ನಂಬಿಕೆಯಿದೆಯೇ ಅಥವಾ ಪೆರಿಯಾರ್ ಅಭಿಪ್ರಾಯವನ್ನು ಬೆಂಬಲಿಸುತ್ತೀರಾ ಎಂದು ಪ್ರಶ್ನಿಸಿದರು.
ದಲಿತರ ಕಣ್ಮಣಿ ಸ್ವಾಮಿ ಪೆರಿಯಾರ್ ಅವರ ಪ್ರತಿಮೆಯ ಸ್ಥಾಪನೆಗೆ ಬಿಜೆಪಿ ಆಕ್ಷೇಪ ವ್ಯಕ್ತಪಡಿಸಿರುವುದಕ್ಕೆ ತೀವ್ರವಾಗಿ ಪ್ರತಿಕ್ರಿಯಿಸಿದ್ದ ಉತ್ತರಪ್ರದೇಶದ ಮುಖ್ಯಮಂತ್ರಿ ಮಾಯಾವತಿ, ಯಾವುದೇ ಪ್ರತಿಮೆ ಪ್ರತಿಷ್ಠಾಪನೆಗೆ ಮುಂಚೆ ನಮ್ಮ ಸರ್ಕಾರವು ಸರ್ವ ಸಮಾಜ ಭಾವನೆಗಳನ್ನು ಗೌರವಿಸುತ್ತದೆ ಎಂದು ಹೇಳಿದ್ದರು.
ರಾಜ್ಯಾದ್ಯಂತ ದಲಿತರ ಪ್ರತಿಮೆಗಳನ್ನು ಸ್ಥಾಪಿಸುತ್ತಿರುವ ಬಗ್ಗೆ ಪ್ರತಿಪಕ್ಷದ ಪಾಳೆಯದಿಂದ ಟೀಕಾಪ್ರಹಾರ ಎದುರಿಸುತ್ತಿರುವ ಮಾಯಾವತಿ, ಗಣ್ಯ ವ್ಯಕ್ತಿಗಳ ಪ್ರತಿಮೆಗಳನ್ನು ಸ್ಥಾಪಿಸುವ ಮುಂಚೆ ಎಲ್ಲ ವರ್ಗದ ಜನರ ಭಾವನೆಗಳನ್ನು ಲೆಕ್ಕಕ್ಕೆ ತೆಗೆದುಕೊಳ್ಳುವುದಾಗಿ ಹೇಳಿದರು.
|