ಪರಮಾಣು ಒಪ್ಪಂದದ ಬಗ್ಗೆ ತ್ವರಿತ ಗತಿಯ ನಿರ್ಧಾರ ಕೈಗೊಳ್ಳುವಂತೆ ಅಮೆರಿಕದ ಒತ್ತಡ ಕುರಿತು ಸಿಪಿಎಂ ಗುರುವಾರ ಟೀಕಿಸಿದ್ದು, ಇಂತಹ ಗಡುವುಗಳನ್ನು ವಿಧಿಸುವುದು ಭಾರತದಂಥ ಪ್ರಜಾಪ್ರಭುತ್ವ ರಾಷ್ಟ್ರಕ್ಕೆ ಅವಮಾನಕರ ಎಂದು ಹೇಳಿದರು.
ಯಾವುದೇ ರಾಷ್ಚ್ರದ ಪ್ರಜಾತಂತ್ರ ಪ್ರಕ್ರಿಯೆ ಬಾಹ್ಯ ಒತ್ತಡಗಳಿಂದ ಮತ್ತು ಪರರಾಷ್ಟ್ರದ ಅಗತ್ಯಗಳಿಂದ ಪ್ರೇರಿತವಾಗಬಾರದು ಎಂದು ಸಿಪಿಎಂ ಪಾಲಿಟ್‌ಬ್ಯೂರೊ ಸದಸ್ಯ ಸೀತಾರಾಂ ಯೆಚೂರಿ ತಿಳಿಸಿದ್ದಾರೆ. ಪಕ್ಷದ ಮುಖವಾಣಿ ಪೀಪಲ್ಸ್ ಡೆಮಾಕ್ರಸಿಯಲ್ಲಿ ಅವರು ಈ ಕುರಿತು ಸಂಪಾದಕೀಯ ಬರೆದಿದ್ದಾರೆ.
" ಅಮೆರಿಕದ ವಿದೇಶಾಂಗ ವ್ಯವಹಾರಗಳ ಅಧೀನ ಕಾರ್ಯದರ್ಶಿ ನಿಕೋಲಾಸ್ ಬರ್ನ್ಸ್ ನ್ಯೂಯಾರ್ಕ್‌ನಲ್ಲಿ ಮಾತನಾಡುತ್ತಾ, ಈ ಒಪ್ಪಂದದ ಬಗ್ಗೆ ಭಾರತ ಶೀಘ್ರಗತಿಯಲ್ಲಿ ಮುನ್ನಡೆಯುವ ಅಗತ್ಯವಿದ್ದು, ಸಕಾರಾತ್ಮಕ ನಿರ್ಧಾರ ಕೈಗೊಳ್ಳುವುದೆಂದು ಆಶಿಸುವುದಾಗಿ ಹೇಳಿದ್ದಕ್ಕೆ ಪ್ರತಿಕ್ರಿಯೆಯಾಗಿ ಯೆಚೂರಿ ಬರೆದಿದ್ದಾರೆ.
ಭಾರತ ಒಪ್ಪಂದದ ಬಗ್ಗೆ ಶೀಘ್ರಗತಿಯಲ್ಲಿ ಮುನ್ನಡೆಯಬೇಕು, ಏಕೆಂದರೆ ಬುಷ್ ಆಡಳಿತವು ಒಪ್ಪಂದ ಅನುಷ್ಠಾನಗೊಳಿಸಿದ ಶಾಸನವನ್ನು ವರ್ಷಾಂತ್ಯದಲ್ಲಿ ಸಂಸತ್ತಿಗೆ ಕಳಿಸಬೇಕಾಗಿದೆ ಎಂದು ಬರ್ನ್ಸ್ ಹೇಳಿದ್ದರು.
ಪ್ರಮುಖ ಶಾಸನವನ್ನು ಚುನಾವಣೆ ವರ್ಷದ ಬೇಸಿಗೆ ಕಾಲದಲ್ಲಿ ಸಂಸತ್ತಿನ ಅನುಮೋದನೆಗೆ ಕಳಿಸುವುದು ಉಚಿತವಲ್ಲ ಎಂದೂ ಅವರು ನುಡಿದಿದ್ದರು.
|