ಜಮ್ಮು ಕಾಶ್ಮಿರದಲ್ಲಿ ಭಯೋತ್ಪಾದಕ ಚಟುವಟಿಕೆಗಳು ನಿಯಂತ್ರಣದಲ್ಲಿದ್ದು ಹಿಂಸಾಚಾರ ಇಳಿಮುಖವಾಗುತ್ತಿರುವುದರಿಂದ ಭದ್ರತಾ ಪಡೆಗಳ ಸಂಖ್ಯೆಯನ್ನು ಕಡಿಮೆ ಮಾಡುವುದು ಸಾಧ್ಯವಿಲ್ಲವೆಂದು ಕೇಂದ್ರ ಮೀಸಲು ಪೊಲೀಸ್ ಪಡೆಯ ಪ್ರಧಾನ ನಿರ್ದೆಶಕ ಐ.ಎಸ್ ಅಹ್ಮದ್ ತಿಳಿಸಿದ್ದಾರೆ.
ಭಯೋತ್ಪಾದನೆ ಸಂಪೂರ್ಣವಾಗಿ ನಿರ್ಮೂಲನೆಯಾಗಿದೆ ಎಂದು ನಾನು ಭಾವಿಸುವುದಿಲ್ಲ ಆದರೆ ಭಯೋತ್ಪಾದನಾ ಕೃತ್ಯಗಳಲ್ಲಿ ಇಳಿಮುಖವಾಗಿದ್ದು ಭಯೋತ್ಪಾದಕರು ಹತಾಶರಾಗಿದ್ದಾರೆ ಎಂದು ತಿಳಿಸಿದ್ದಾರೆ. ಜಮ್ಮು ಕಾಶ್ಮಿರದಲ್ಲಿ ಭದ್ರತಾಪಡೆಗಳನ್ನು ಹಿಂತೆಗೆದುಕೊಳ್ಳುವ ಪ್ರಶ್ನೆ ಉದ್ಭವಿಸುವುದಿಲ್ಲವೆಂದು ಹೇಳಿದ್ದಾರೆ.
ಒಟ್ಟು 201 ಬಟಾಲಿಯನ್‌ಗಳಲ್ಲಿ ಶೇ 40 ರಷ್ಟು ಅಂದರೆ 72 ಬಟಾಲಿಯನ್‌ಗಳನ್ನು ಸುಮಾರು 60 ಸಾವಿರ ಭದ್ರತಾಪಡೆಗಳನ್ನು ರಾಜ್ಯದಲ್ಲಿ ನಿಯೋಜಿಸಲಾಗಿದೆ ಎಂದು ತಿಳಿಸಿದ್ದಾರೆ.
ಸೆಪ್ಟೆಂಬರ್ 30ಕ್ಕೆ ಅಂತ್ಯಗೊಂಡಂತೆ 71 ಭಯೋತ್ಪಾದಕರನ್ನು ಹತ್ಯೆ ಮಾಡಲಾಗಿದ್ದು 206 ಉಗ್ರರನ್ನು ಭಯೋತ್ಪಾದಕ ಕೃತ್ಯಗಳ ಚಟುವಟಿಕೆಯ ಹಿನ್ನಲೆಯಲ್ಲಿ ಬಂಧಿಸಲಾಗಿದೆ. ಭದ್ರತಾ ಪಡೆಗಳು ನಡೆಸಿದ 68 ಎನ್‌ಕೌಂಟರ್‌ಗಳಲ್ಲಿ 15 ಭದ್ರತಾಪಡೆಗಳ ಪೊಲೀಸರು ಸಾವನ್ನಪ್ಪಿದ್ದು, 106 ಮಂದಿ ಗಾಯಗೊಂಡಿದ್ದಾರೆ. 127 ಶಸ್ತ್ರಾಸ್ತ್ರಗಳು ಹಾಗೂ 116 ಕೆ.ಜಿ ಸ್ಪೋಟಕಗಳನ್ನು ಉಗ್ರರಿಂದ ವಶಪಡಿಸಿಕೊಳ್ಳಲಾಗಿದೆ ಎಂದು ವಿವರಣೆಯನ್ನು ನೀಡಿದ್ದಾರೆ. ಪ್ಯಾರಾಮಿಲಿಟರಿ ಪಡೆಗಳು ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದು ಪಡೆಗಳಿಗೆ ಬೇಕಾದಲ್ಲಿ ಯಾವುದೇ ರೀತಿಯ ನೆರವು ನೀಡಲು ಸಿದ್ದ ಎಂದು ನುಡಿದರು.
|