ಗೋಧ್ರಾ ದುರಂತದ ಬಳಿಕ ಸಂಭವಿಸಿದ ಗಲಭೆಯಲ್ಲಿ ಗುಜರಾತಿನ ಮುಖ್ಯಮಂತ್ರಿ ನರೇಂದ್ರ ಮೋದಿ ಮುಸ್ಲಿಮರ ಹತ್ಯೆಗೆ ಪ್ರಚೋದನೆ ನೀಡಿದರೆಂದು ತೆಹಲ್ಕಾ ತನಿಖೆಯು ಬಹಿರಂಗ ಮಾಡಿರುವುದು ಆಘಾತಕಾರಿ ಸಂಗತಿಯಾಗಿದೆ ಎಂದು ಕಾಂಗ್ರೆಸ್ ಶುಕ್ರವಾರ ತಿಳಿಸಿದ್ದು, ಗುಜರಾತ್ ಮುಖ್ಯಮಂತ್ರಿ ತಕ್ಷಣವೇ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದೆ.
ನರೇಂದ್ರ ಮೋದಿ ಅಧಿಕಾರದಲ್ಲಿ ಮುಂದುವರಿಯುವ ಎಲ್ಲ ನೈತಿಕ ಮತ್ತು ಸಾಂವಿಧಾನಿಕ ಹಕ್ಕನ್ನು ಕಳೆದುಕೊಂಡಿದ್ದಾರೆ. ನಾವು ಇದನ್ನು ಮುಂಚೆಯೇ ಹೇಳಿದ್ದು ಆ ಮಾತನ್ನು ಪುನರಾವರ್ತಿಸುತ್ತಿದ್ದೇವೆ ಎಂದು ಕಾಂಗ್ರೆಸ್ ವಕ್ತಾರೆ ಜಯಂತಿ ನಟರಾಜನ್ ತಿಳಿಸಿದರು.
ಸಾಂವಿಧಾನಿಕ ಮೌಲ್ಯಗಳನ್ನು ಮತ್ತು ಮಾನವ ಹಕ್ಕುಗಳ ರಕ್ಷಣೆ ಆಗಬೇಕಿದ್ದರೆ ಮೋದಿ ತಕ್ಷಣವೇ ಹುದ್ದೆಗೆ ರಾಜೀನಾಮೆ ನೀಡಬೇಕೆಂದು ಅವರು ಆಗ್ರಹಿಸಿದ್ದಾರೆ. ತೆಹಲ್ಕಾದ ತನಿಖಾ ವರದಿ ಬಹಿರಂಗಪಡಿಸಿದ ಆಘಾತಕಾರಿ ಮತ್ತು ಮನಕಲಕುವ ಸಂಗತಿಯಿಂದ ಇಡೀ ರಾಷ್ಟ್ರದ ಜನತೆ ತಿಳಿದಿದ್ದ ಸತ್ಯವು ಅನುಮಾನದ ನೆರಳು ಸುಳಿಯದಂತೆ ಸಾಬೀತಾಗಿದೆ ಎಂದು ನಟರಾಜನ್ ಹೇಳಿದರು.
ಸಾಮೂಹಿತ ಹತ್ಯೆಕಾಂಡಕ್ಕೆ ಮುಖ್ಯಮಂತ್ರಿ ಸಾರಥಿಯಾಗಿ ಪೂರ್ಣ ಬೆಂಬಲ ನೀಡಿದ್ದು, ಮಾನವ ಹಕ್ಕುಗಳ ಉಲ್ಲಂಘನೆ ಮತ್ತು ಹತ್ಯೆಯ ಕೆಟ್ಟ ಪ್ರಕರಣ ಎಂದು ಅವರು ಹೇಳಿದರು.
ಆದರೆ ತೆಹಲ್ಕಾ ಬಹಿರಂಗಕ್ಕೆ ಬಿಜೆಪಿಯ ಪ್ರತಿಕ್ರಿಯೆ ಮತ್ತಷ್ಟು ಆಘಾತಕಾರಿಯಾಗಿದೆ. ಬಿಜೆಪಿಯ ಹಿರಿಯ ನಾಯಕರು ದಿವ್ಯ ಮೌನ ತಾಳಿದ್ದಾರೆ. ಈ ಭಯಾನಕ ಘಟನೆಯನ್ನು ಖಂಡಿಸಲು ಅವರು ಮುಂದಡಿಯಿಡುತ್ತಿಲ್ಲ ಎಂದು ನುಡಿದರು.
|