ನಿತೀಶ್ ಕುಮಾರ್ ಸರ್ಕಾರ ಬಿಹಾರದಲ್ಲಿ 2 ವರ್ಷಗಳ ಅಧಿಕಾರಾವಧಿ ಮುಗಿಸುತ್ತಿದ್ದಂತೆ ಬಿಹಾರದ ಪ್ರತಿಪಕ್ಷ ಆರ್‌ಜೆಡಿ ಭಾನುವಾರ ಎನ್‌ಡಿಎ ಆಡಳಿತದ ವಿರುದ್ಧ ಸಾರ್ವಜನಿಕ ರಾಲಿ "ಚೇತ್ವಾನಿ" ಸಂಘಟಿಸಿದೆ. ರೈಲ್ವೆ ಸಚಿವ ಲಾಲು ಪ್ರಸಾದ್ ಯಾದವ್ ಜನಸಮೂಹವನ್ನು ಆಕರ್ಷಿಸುವ ಶಕ್ತಿಪ್ರದರ್ಶನ ಎಂದು ಇದನ್ನು ಭಾವಿಸಲಾಗಿದೆ.
ಜನಸಮೂಹವನ್ನು ಸೂಜಿಗಲ್ಲಿನಂತೆ ಸೆಳೆಯುವುದಕ್ಕೆ ಹೆಸರಾದ ಲಾಲು ಅವರು ರಾಜ್ಯದಲ್ಲಿ ಅಧಿಕಾರ ಹಿಡಿದಿದ್ದಾಗ ಆಯೋಜಿಸಿದ್ದ ಲಾಠಿ ರಾಲಿ ಮತ್ತು ಗರೀಬ್ ರಾಲಿಗಳು ಲಾಲು ಸಾಮರ್ಥ್ಯಕ್ಕೆ ಹಿಡಿದ ಕನ್ನಡಿಯಾಗಿತ್ತು. ಚೇತ್ವಾನಿ ರಾಲಿಯು ಹಿಂದಿನ ಎಲ್ಲ ರಾಲಿಗಳನ್ನು ಸಂಖ್ಯಾಬಲದಲ್ಲಿ ಹಿಂದಿಕ್ಕುತ್ತದೆ ಎಂದು ಲಾಲು ಹೇಳಿದರು.
ಸರ್ಕಾರದ ವಿರುದ್ಧ ಜನರ ಹತಾಶೆ ಹೆಚ್ಚುತ್ತಿದೆ. ಅಭಿವೃದ್ಧಿ ಮಾತು ಬರೀ ಬೊಗಳೆಯಾಗಿದೆ. ಜನರ ನಿರೀಕ್ಷೆಗೆ ತಕ್ಕಂತೆ ಎನ್‌ಡಿಎ ಸರ್ಕಾರ ಕೆಲಸ ಮಾಡುತ್ತಿಲ್ಲ. ಯಾವುದೇ ಅಭಿವೃದ್ಧಿಯ ಸುಳಿವು ಗೋಚರಿಸುತ್ತಿಲ್ಲ.
ಅಧಿಕಾರಶಾಹಿ ಮಾತ್ರ ಬಲಿಷ್ಠರಾಗಿ ಬೆಳೆದಿದ್ದಾರೆ ಎಂದು ಲಾಲು ಹೇಳಿದರು, ಈ ರಾಲಿಯು ನಿತೀಶ್ ಕುಮಾರ್ ಸರ್ಕಾರದ ಅಂತ್ಯಕ್ಕೆ ಮುನ್ನುಡಿ ಬರೆದಿದೆ ಎಂದು ಅವರು ನುಡಿದರು.
|