ಪಶ್ಚಿಮಬಂಗಾಲದ ನಂದಿಗ್ರಾಮದಲ್ಲಿ ಭಾನುವಾರ ಬೆಳಿಗ್ಗೆ ಸಂಭವಿಸಿದ ಬಾಂಬ್ ಸ್ಫೋಟದಲ್ಲಿ ಮೂರು ಮಂದಿ ಬಲಿಯಾಗಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ನಂದಿಗ್ರಾಮ ಪ್ರದೇಶದಲ್ಲಿ ಕೈಗಾರಿಕೆ ಸ್ಥಾಪನೆಗಾಗಿ ಭೂ ಆಕ್ರಮಣ ಕಾರ್ಯವನ್ನು ವಿರೋಧಿಸಿ ಭೂಮಿ ಉಚ್ಛೇದ್ ಪ್ರತಿರೋಧ್ ಸಂಘಟನೆ ಭಾನುವಾರ ಬೆಳಿಗ್ಗೆ 12ಗಂಟೆಗಳ ಕಾಲ ಬಂದ್‌ಗೆ ಕರೆ ನೀಡಿದ್ದು,ಈ ಸಂದರ್ಭದಲ್ಲಿ ಸಂಭವಿಸಿದ ಘರ್ಷಣೆ ಮತ್ತು ಬಾಂಬ್ ಸ್ಫೋಟದಲ್ಲಿ ಈ ದುರಂತ ಸಂಭವಿಸಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ.
ನಂದಿಗ್ರಾಮದ ಶೇರ್ಖಾನ್ ಚೌಕ್ ಸಮೀಪದ ಸಿಪಿಐ(ಎಂ)ಪಕ್ಷದ ಕ್ಯಾಂಪ್ ಸಮೀಪ ಬಾಂಬ್ ಸ್ಫೋಟಗೊಂಡ ಪರಿಣಾಮ ಸಿಪಿಐಎಂನ ಮೂರು ಮಂದಿ ಕಾರ್ಯಕರ್ತರು ಸ್ಥಳದಲ್ಲೇ ಸಾವನ್ನಪ್ಪಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ.
ನಂದಿಗ್ರಾಮದ ಪಶ್ಚಿಮ ಮಿಡ್ನಾಪುರ್ ಜಿಲ್ಲೆಯಲ್ಲಿ ರೈತರ ಭೂಮಿಯನ್ನು ವಶಪಡಿಸಿಕೊಳ್ಳುವುದನ್ನು ವಿರೋಧಿಸಿ ಭೂಮಿ ಉಚ್ಚೇದ್ ಪ್ರತಿರೋಧ್ ಸಮಿತಿ ನಡೆಸಿದ ಚಳವಳಿಯಲ್ಲಿ ಉದ್ದೇಶಪೂರ್ವಕವಾಗಿ ಪಕ್ಷದ ಕಾರ್ಯಕರ್ತರನ್ನು ಹತ್ಯೆಗೈದಿರುವುದಾಗಿ ಸಿಪಿಐಎಂ ಬಲವಾಗಿ ಆರೋಪಿಸಿದೆ.
ಆದರೆ ಬಿಯುಪಿಸಿ ಕೋರ್ ಸಮಿತಿಯ ಸದಸ್ಯ ಸಾಬುಜ್ ಪ್ರಧಾನ್ ಈ ಆರೋಪವನ್ನು ಅಲ್ಲಗಳೆದಿದ್ದು,ಆ ಸ್ಥಳದಲ್ಲಿ ಮೂರು ಮಂದಿ ಬಾಂಬ್ ತಯಾರಿಕೆಯಲ್ಲಿ ತೊಡಗಿದ್ದಾಗ ಸ್ಫೋಟ ಸಂಭವಿಸಿರುವುದಾಗಿ ತಿರುಗೇಟು ನೀಡಿದ್ದಾರೆ.
ಇದೀಗ ನಂದಿಗ್ರಾಮ ಉದ್ನಿಗ್ನ ಸ್ಥಿತಿಯಲ್ಲಿದ್ದು,ಪರಿಸ್ಥಿತಿ ಹತೋಟಿಯಲ್ಲಿರುವುದಾಗಿ ಪೊಲೀಸ್ ವರಿಷ್ಠಾಧಿಕಾರಿಗಳು ತಿಳಿಸಿದ್ದಾರೆ.
|