ಉನ್ನತ ಸ್ತರದ ರಾಜತಾಂತ್ರಿಕರೊಬ್ಬರು ಸೋಮವಾರ ಕಾನೂನು ನಿರೂಪಕರ ಎದುರು ಹಾಜರಾಗುತ್ತಿರುವುದು ಸಂಸದೀಯ ಇತಿಹಾಸದಲ್ಲೇ ಬಹುಷಃ ಇದೇ ಮೊದಲು.
ಭಾರತ-ಅಮೆರಿಕ ಪರಮಾಣು ಒಪ್ಪಂದ ವಿರೋಧಿಸುವವರು ತಲೆಕಡಿದ ಕೋಳಿಗಳು ಎಂದು ಅಮೆರಿಕದ ರಾಯಭಾರಿ ರೊನೆನ್ ಸೇನ್ ಅವರ ವಿವಾದಾತ್ಮಕ ಪ್ರತಿಕ್ರಿಯೆ ಹಿನ್ನೆಲೆಯಲ್ಲಿ ಅವರು ಲೋಕಸಭೆಯ ಹಕ್ಕುಬಾಧ್ಯತಾ ಸಮಿತಿಯ ಎದುರು ಹಾಜರಾಗಬೇಕಿದೆ. ಸಮಿತಿಯ ಸದಸ್ಯರಿಂದ ಸೇನ್ ತೀವ್ರ ವಾಗ್ಬಾಣಗಳಿಗೆ ಗುರಿಯಾಗುವರೆಂದು ನಿರೀಕ್ಷಿಸಲಾಗಿದೆ.
ಸೇನ್ ವಿದೇಶಾಂಗ ಸಚಿವಾಲಯಕ್ಕೆ ಈ ಕುರಿತು ಬೇಷರತ್ ಕ್ಷಮಾಪಣೆ ಕೋರಿದ್ದರು. ವಿದೇಶಾಂಗ ಸಚಿವಾಲಯ ಲೋಕಸಭೆ ಸ್ಪೀಕರ್ ಸೋಮನಾಥ ಚಟರ್ಜಿ ಅವರಿಗೆ ಈ ಬಗ್ಗೆ ಮನವರಿಕೆ ಮಾಡಿ,ಸೇನ್ ಬೇಷರತ್ ಕ್ಷಮಾಪಣೆ ಕೋರಿದ್ದರಿಂದ ಈ ವಿಷಯನ್ನು ಪರಿಸಮಾಪ್ತಿಗೊಳಿಸುವಂತೆ ಕೋರಿಕೊಂಡಿತ್ತು,
ಸಂಸದರು ರೊನೆನ್ ಹೇಳಿಕೆಯನ್ನು ಪ್ರಸ್ತಾಪಿಸಿ ಅವರ ಮೇಲೆ ವಾಗ್ದಾಳಿ ಮಾಡಿದಾಗ, ತಾವು ಪತ್ರಕರ್ತರನ್ನು ಉದ್ದೇಶಿಸಿ ಈ ಮಾತು ಹೇಳಿದ್ದೇನೆಯೇ ಹೊರತು ಸಂಸತ್ ಸದಸ್ಯರಿಗೆ ಹೇಳಲಿಲ್ಲ ಎಂದು ರೊನೆನ್ ಸೇನ್ ಹೇಳಿದ್ದರು. ತಮ್ಮ ಮಾತಿನಿಂದ ಅವರ ಭಾವನೆಗಳಿಗೆ ನೋವುಂಟಾಗಿದ್ದರೆ ತಾವು ಬೇಷರತ್ ಕ್ಷಮೆ ಕೋರುವುದಾಗಿ ಸೇನ್ ತಿಳಿಸಿದ್ದರು.
|