ಕಾಂಗ್ರೆಸ್ ನೇತೃತ್ವದ ಕೇಂದ್ರ ಸರ್ಕಾರ ಕರ್ನಾಟಕದಲ್ಲಿ ಜೆಡಿಎಸ್-ಬಿಜೆಪಿ ಸರ್ಕಾರ ಸ್ಥಾಪನೆಗೆ ಉದ್ದೇಶಪೂರ್ವಕ ವಿಳಂಬ ಮಾಡುತ್ತಿದೆ ಎಂದು ಬಿಜೆಪಿ ಮಂಗಳವಾರ ಆರೋಪಿಸಿದೆ. ಈ ವಿಷಯವನ್ನು ಪ್ರಧಾನಿ ಮನಮೋಹನ ಸಿಂಗ್ ಅವರ ಜತೆ ಪ್ರಸ್ತಾಪಿಸುವುದಾಗಿಯೂ ಅದು ಹೇಳಿದೆ.
ರಾಮೇಶ್ವರ್ ಠಾಕೂರ್ ನಿರ್ಧಾರ ಕೈಗೊಳ್ಳಲು ವಿಳಂಬ ಧೋರಣೆ ಅನುಸರಿಸುತ್ತಿರುವುದರಿಂದ ಮತ್ತು ಶಾಸಕರ ಬೇಡಿಕೆಗೆ ಪ್ರತಿಕ್ರಿಯಿಸುತ್ತಿಲ್ಲವಾದ್ದರಿಂದ ಕರ್ನಾಟಕದ ಎಲ್ಲ ಸಂಸದರು ಪ್ರಧಾನಮಂತ್ರಿಯನ್ನು ಬುಧವಾರ ಭೇಟಿ ಮಾಡುವರೆಂದು ಪಕ್ಷದ ಹಿರಿಯ ನಾಯಕ ವೆಂಕಯ್ಯ ನಾಯ್ಡು ವರದಿಗಾರರಿಗೆ ತಿಳಿಸಿದರು.
ರಾಜ್ಯಪಾಲರ ಪ್ರಥಮ ಆದ್ಯತೆ ಏನೆಂದರೆ ಕರ್ನಾಟಕದಲ್ಲಿ ಜನಪ್ರಿಯ ಸರ್ಕಾರದ ರಚನೆಯ ಸಾಧ್ಯತೆಗಳನ್ನು ಶೋಧಿಸುವುದು. ಆದರೆ ರಾಜ್ಯಪಾಲರು ಸಕ್ರಿಯರಾಗದಿದ್ದರೆ ಅನುಮಾನದ ಬೊಟ್ಟು ಕೇಂದ್ರದತ್ತ ಹೊರಳುತ್ತದೆ ಎಂದು ಅವರು ನುಡಿದರು.
ವಿಧಾನಸಭೆ ವಿಸರ್ಜನೆಗೆ ಒತ್ತಾಯಿಸುತ್ತಿರುವ ಕಾಂಗ್ರೆಸ್ ಪಕ್ಷವನ್ನು ತರಾಟೆಗೆ ತೆಗೆದುಕೊಂಡ ಅವರು. ಗೋವಾ, ಜಾರ್ಖಂಡ್ ಮತ್ತು ಬಿಹಾರದಲ್ಲಿ ಕಂಡಂತೆ ಕಾಂಗ್ರೆಸ್ ಹಿಂಭಾಗಿಲಿನಿಂದ ಅಧಿಕಾರ ಕಬಳಿಸುವ ಸಂಸ್ಕೃತಿ ಹೊಂದಿದೆ ಎಂದು ಅವರು ವಾಗ್ದಾಳಿ ಮಾಡಿದರು.
ಕಾಂಗ್ರೆಸ್ ಪ್ರಾಯೋಜಿತ ಕೇಂದ್ರ ಸರ್ಕಾರವು ರಾಜ್ಯಪಾಲರನ್ನು ಕೇವಲ ನಟರನ್ನಾಗಿ ಪರಿವರ್ತಿಸಿದ್ದು, ದೆಹಲಿಯ ಚಿತ್ರಕಥೆಗೆ ಅನುಸಾರವಾಗಿ ಅವರು ಅಭಿನಯಿಸುತ್ತಾರೆ ಎಂದು ನಾಯ್ಡು ವ್ಯಂಗ್ಯವಾಡಿದರು.
|