ಭಾರತ-ಅಮೆರಿಕ ಪರಮಾಣು ಒಪ್ಪಂದದ ಬಗ್ಗೆ ತೀವ್ರ ವಿರೋಧವಿದ್ದರೂ, ಸಿಪಿಐ ನಾಯಕ ಪ್ರಕಾಶ್ ಕಾರಟ್ ಅವರು ಪ್ರಧಾನಿ ಮನಮೋಹನ ಸಿಂಗ್ ಅವರ ಪ್ರಾಮಾಣಿಕತೆ ಪ್ರಶ್ನಿಸುವಂತಿಲ್ಲ ಎಂದು ಹೇಳಿ, ಪ್ರಧಾನಿ ರಾಜೀನಾಮೆ ನೀಡಬೇಕೆಂಬ ಸಲಹೆಯನ್ನು ತಿರಸ್ಕರಿಸಿದ್ದಾರೆ.
ಎಡಪಕ್ಷಗಳಿಗೆ ಸಿಂಗ್ ಬಗ್ಗೆ ಗೌರವಾದರವಿದೆ ಎಂದು ಹೇಳಿದ ಅವರು ಯುಪಿಎ ಸರ್ಕಾರ ತನ್ನ ಪೂರ್ಣಾವಧಿ ಮುಗಿಸದಿರುವುದಕ್ಕೆ ಯಾವುದೇ ಕಾರಣವಿಲ್ಲ ಎಂದು ಹೇಳಿದರು. ಪರಮಾಣು ಸಹಕಾರ ಒಪ್ಪಂದದ ಬಗ್ಗೆ ಪ್ರಧಾನಮಂತ್ರಿ ಮತ್ತು ಎಡಪಕ್ಷಗಳ ನಿಲುವಿನಲ್ಲಿ ಕೆಲವು ಮೂಲಭೂತ ವ್ಯತ್ಯಾಸಗಳಿರುವುದು ನಿಜ.ಒಪ್ಪಂದದ ದೃಢತೆ ಮತ್ತು ಬಳಕೆ ಬಗ್ಗೆ ಅವರಿಗೆ ಬಲವಾದ ನಂಬಿಕೆಯಿರುವುದನ್ನು ನಾವು ಗುರುತಿಸಿದ್ದೇವೆ ಎಂದು ಟೆಲಿಗ್ರಾಫ್ ಸುದ್ದಿಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
ಒಪ್ಪಂದದ ಬಗ್ಗೆ ಅವರ ಭಿನ್ನ ನಿಲುವಿನಿಂದ ಪ್ರಧಾನಿ ಬಗ್ಗೆ ನಮಗೆ ಗೌರವವಿಲ್ಲವೆಂದು ಅರ್ಥವಲ್ಲ. ಅವರ ಪ್ರಾಮಾಣಿಕತೆಯನ್ನು ಪ್ರಶ್ನಿಸುವಂತಿಲ್ಲ ಎಂದು ಕಾರಟ್ ಹೇಳಿದರು. ಪ್ರಧಾನಮಂತ್ರಿ ಮೂರು ತಿಂಗಳ ಕೆಳಗೆ ಅದೇ ಸುದ್ದಿಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಸರ್ಕಾರ ಮತ್ತು ಎಡಪಕ್ಷಗಳ ನಡುವೆ ಪರಮಾಣು ಬಿಕ್ಕಟ್ಟಿನ ಬಗ್ಗೆ ದುಡುಕಿನ ಹೇಳಿಕೆ ನೀಡಿದರೆಂಬುದನ್ನು ಕಾರಟ್ ಒಪ್ಪಲಿಲ್ಲ.
ಅದರಿಂದ ನಮ್ಮ ನಿಲುವಿನಲ್ಲಿ ಯಾವುದೇ ಬದಲಾಣೆಯಾಗದು ಮತ್ತು ಯಾವುದೇ ಬಿಕ್ಕಟ್ಟು ಸೃಷ್ಟಿಸುವುದಿಲ್ಲ. ರಾಜಕೀಯ ಬಿಕ್ಕಟ್ಟು ಭಿನ್ನ ನಿಲುವಿನಿಂದ ಉದ್ಭವಿಸಿತೇ ಹೊರತು ವೈಯಕ್ತಿಕ ಭಿನ್ನಾಭಿಪ್ರಾಯದಿಂದಲ್ಲ ಎಂದು ಹೇಳಿದರು.
|